Home ಸಂಪಾದಕೀಯ ಸಂಪಾದಕೀಯ: ಮಹದಾಯಿಗೆ ಬೇಕಿದೆ ಸುಪ್ರೀಂಕೋರ್ಟ್ ಶ್ರೀರಕ್ಷೆ

ಸಂಪಾದಕೀಯ: ಮಹದಾಯಿಗೆ ಬೇಕಿದೆ ಸುಪ್ರೀಂಕೋರ್ಟ್ ಶ್ರೀರಕ್ಷೆ

0

ಸಂಯುಕ್ತ ಕರ್ನಾಟಕ ದಿನಪತ್ರಿಕೆ ಶನಿವಾರದ ಸಂಪಾದಕೀಯ

ಮಹದಾಯಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಗೋವಾ ತಕರಾರು ಅರ್ಜಿ ಸಲ್ಲಿಸಿದೆ. ಮಹದಾಯಿ ಯೋಜನೆ ಕೈಗೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ಕೋರಿದೆ. ಈಗ ಕರ್ನಾಟಕ ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆಯಬಹುದು. ಆದರೆ ಗೋವಾ ಹಾಕಿರುವ ಅರ್ಜಿ ಹಾಗೆ ಇರುತ್ತದೆ. ಇದರ ನಡುವೆ ಗೋವಾ ವಿಧಾನಸಭೆಯಲ್ಲಿ ಮಹದಾಯಿ ಬಗ್ಗೆ ರೋಷಾವೇಷದ ಮಾತುಗಳು ಕೇಳಿ ಬಂದಿವೆ.

ಈಗ ಕರ್ನಾಟಕದ ಉಪಮುಖ್ಯಮಂತ್ರಿ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಏನೇ ಆದರೂ ವಿವಾದ ಸುಪ್ರೀಂ ಕೋರ್ಟ್ ಮುಂದಿರುವುದು ಸತ್ಯ. ಅದರಿಂದ ಸುಪ್ರೀಂ ತೀರ್ಪಿಗೆ ಕಾಯುವುದು ಅನಿವಾರ್ಯ. ಸಾಮಾನ್ಯವಾಗಿ ಕುಡಿಯುವ ನೀರಿಗೆ ಯಾವ ತಕರಾರು ಇರಬಾರದು. ನಮ್ಮ ಪಾಲಿನ ನೀರು ಬಳಸಲು ಅಡ್ಡಿ ಇರಬಾರದು. ಆದರೆ ಗೋವಾದವರು ನ್ಯಾಯಾಧಿಕರಣದ ತೀರ್ಪನ್ನೇ ಪ್ರಶ್ನಿಸಿದ್ದಾರೆ.

ಅಲ್ಲದೆ ಅರಣ್ಯ ಇಲಾಖೆ ಕೂಡ ಈ ವಿಷಯದಲ್ಲಿ ವಸ್ತುನಿಷ್ಠವಾಗಿ ವರ್ತಿಸಬೇಕು. ಗೋವಾಗೆ ಹೋಗುವ ವಿದ್ಯುತ್ ಮಾರ್ಗಕ್ಕೆ ಕಾಡು ಕಡಿಯಲು ಕರ್ನಾಟಕದ ಅನುಮತಿ ಪಡೆದವರು ಅದೇರೀತಿ ಕುಡಿಯುವ ನೀರಿಗೆ ಅನುಮತಿ ಕೊಡುವುದಿಲ್ಲ ಎಂಬುದು ಯಾವ ನ್ಯಾಯ? ಒಕ್ಕೂಟ ವ್ಯವಸ್ಥೆಯಲ್ಲಿ ಕೊಡು-ಕೊಡುಗೆ ಇದ್ದೇ ಇರುತ್ತದೆ. ರಾಜ್ಯದ ಗಡಿಗಳು ಇರುವುದು ಆಡಳಿತಕ್ಕೆ ಹೊರತು ನಿಸರ್ಗಕ್ಕೆ ಅಲ್ಲ. ಮಹದಾಯಿಯನ್ನು ಹೀಗೆ ಹರಿಯಬೇಕೆಂದು ಯಾರೂ ನಿಯಮ ಮಾಡಲು ಬರುವುದಿಲ್ಲ. ನಿಸರ್ಗದ ಕೊಡುಗೆಯನ್ನು ಎಲ್ಲರೂ ಹಂಚಿಕೊಂಡು ಬದುಕಬೇಕು.

ಹಿಂದೆ ಗೋವಾ ವಿಮೋಚನಾ ಚಳವಳಿ ನಡೆದಾಗ ಕನ್ನಡಿಗರೂ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಗೋವಾ ಸ್ವತಂತ್ರ ರಾಜ್ಯವಾಗಿ ಉಳಿಯಲು ತೀರ್ಮಾನಿಸಿದಾಗ ಕನ್ನಡಿಗರೆಲ್ಲರೂ ಸ್ವಾಗತಿಸಿದರು. ಈಗಲೂ ಗೋವಾದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಈಗ ಮಹದಾಯಿ ನಮ್ಮ ಮನಸ್ಸು ಒಡೆಯುವುದಕ್ಕೆ ಕಾರಣವಾಗಬಾರದು.

ರಾಜಕೀಯ ಪಕ್ಷಗಳು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿಲ್ಲ. ಮತಗಳಿಕೆಗೆ ಸ್ಥಳೀಯ ಭಾವನೆಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ಇದು ಸರಿಯಾದ ಕ್ರಮವಲ್ಲ. ಗೋವಾ ಬಿಜೆಪಿ ಒಂದು ಹೇಳುವುದು, ಕರ್ನಾಟಕ ಬಿಜೆಪಿ ಮತ್ತೊಂದು ರೀತಿ ಮಾತನಾಡಿದರೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ಇರುವ ವಿಶ್ವಾಸ ಹೋಗುತ್ತದೆ. ಇದನ್ನೇ ಸುಪ್ರೀಂ ಕೋರ್ಟ್ ಎಚ್ಚರಿಕೆ ರೂಪದಲ್ಲಿ ತಿಳಿಸಿದೆ. ಒಕ್ಕೂಟ ರಚನೆ ಪ್ರಜಾಪ್ರಭುತ್ವದ ಜೀವಾಳ. ಅದನ್ನು ಮತಗಳಿಕೆಗಾಗಿ ಕೈಬಿಡುವುದಕ್ಕೆ ಬರುವುದಿಲ್ಲ.

ನೆಲಜಲ ಸೇರಿದಂತೆ ಎಲ್ಲ ನೈಸರ್ಗಿಕ ಸಂಪತ್ತು ರಾಷ್ಟ್ರೀಯ ಆಸ್ತಿ. ಅದು ಭೌಗೋಳಿಕವಾಗಿ ಒಂದು ರಾಜ್ಯದಲ್ಲಿರಬಹುದು. ಅದನ್ನು ಪರಸ್ಪರ ಹೊಂದಾಣಿಕೆಯಿಂದ ಹಂಚಿಕೊಂಡು ಬಾಳುವೆ ಮಾಡಬೇಕೆ ಹೊರತು ಇದು ನಮ್ಮದೇ ಎಂಬ ಧೋರಣೆ ತಪ್ಪು. ಈ ವಿಷಯದಲ್ಲಿ ತಮಿಳುನಾಡು ಕೂಡ ತಪ್ಪಿ ನಡೆದಿರುವುದು ನಮ್ಮ ಕಣ್ಣಮುಂದಿದೆ. ಗೋವಾ ಅದೇ ದಾರಿಯಲ್ಲಿ ಹೋಗಬಾರದು. ನಿಸರ್ಗ ಕೊಟ್ಟ ಕೊಡುಗೆ ನಾಳೆ ಇಲ್ಲವಾಗಬಹುದು.

ಮಹದಾಯಿ ತನ್ನ ಹರಿಯುವ ದಿಕ್ಕನ್ನೇ ಬದಲಿಸುವುದಿಲ್ಲ ಎಂದು ಯಾರಾದರೂ ಹೇಳಲು ಸಾಧ್ಯವೇ? ಈಗ ಕುಡಿಯುವ ನೀರಿಗೆ ಬಳಸಿಕೊಳ್ಳಲು ಮಹದಾಯಿ ಮೇಲಿರುವ ಎಲ್ಲ ಖಟ್ಲೆಗಳನ್ನು ಕೈಬಿಟ್ಟರೆ ನೀರಿನ ಹಂಚಿಕೆ ಸುಲಭವಾಗುತ್ತದೆ. ಇದರಲ್ಲಿ ಯಾವ ರಾಜಕೀಯ ಪಕ್ಷದ ಹೆಚ್ಚುಗಾರಿಕೆ ಏನಿಲ್ಲ? ಪರಸ್ಪರ ವಿಶ್ವಾಸದಿಂದ ಹಂಚಿಕೊಂಡಾಗ ಯಾರ ಹಿರಿಮೆಯೂ ಅದರಲ್ಲಿ ಇರುವುದಿಲ್ಲ. ಮಹದಾಯಿ ವಿವಾದ ಈ ದೃಷ್ಟಿಯಿಂದ ಇತರ ವಿವಾದಗಳಿಗೆ ಮಾದರಿಯಾಗಲು ಎಲ್ಲ ಅವಕಾಶವಿದೆ. ಇದರಲ್ಲಿ ಯಾರಿಗೂ ಲಾಭ- ನಷ್ಟ ಇರುವುದಿಲ್ಲ.

ಕೃಷ್ಣಾ, ಕಾವೇರಿ ವಿವಾದಗಳು ಒಂದು ಹಂತ ತಲುಪಿ ನಮ್ಮ ಭಾಗದ ನೀರನ್ನು ಬಳಸಿಕೊಳ್ಳುತ್ತಿದ್ದೇವೆ. ಅದೇರೀತಿ ಮಹದಾಯಿ ನೀರು ಬಳಕೆಗೆ ಲಭಿಸಬೇಕಿದೆ, ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾದಲ್ಲಿ ನೆಲೆಸಿದ್ದಾರೆ. ಅದೇರೀತಿ ಗೋವಾದವರೂ ಕರ್ನಾಟಕದಲ್ಲಿದ್ದಾರೆ. ಅವರ ಸುಮಧುರ ಬಾಂದವ್ಯಕ್ಕೆ ಅಡ್ಡಿ ತರುವುದು ಬೇಡ. ಕನ್ನಡಿಗರು ತಮ್ಮ ರಜೆ ದಿನಗಳನ್ನು ಕಳೆಯಲು ಗೋವಾಗೆ ಹೋಗದೇ ಇರುವುದಿಲ್ಲ. ಹೀಗಾಗಿ ಯುವ ದಂಪತಿಗಳಿಗೆ ಮತ್ತು ಪ್ರೇಮಿಗಳಿಗೆ ಗೋವಾ ಒಂದು ಸ್ವರ್ಗ. ಇಂಥ ಸ್ವರ್ಗದ ಬೀಡಿನಿಂದ ದ್ವೇಷದ ಗಾಳಿ ಬೀಸಬಾರದು.

ಅದೇರೀತಿ ಗೋವಾ ಜನ ಕರ್ನಾಟಕಕ್ಕೆ ಬಂದು ಹೋಗುವುದು ಸಾಮಾನ್ಯ. ಅವರನ್ನು ಕನ್ನಡಿಗರು ಎಂದೂ ಬೇರೆಯಾಗಿ ಕಂಡಿಲ್ಲ. ಅದರಲ್ಲೂ ಕರಾವಳಿ ಮತ್ತು ಗೋವಾದವರಿಗೆ ಅನ್ಯೋನ್ಯ ಸಂಬಂಧವಿದೆ. ಇದಕ್ಕೆ ಎಂದೂ ಧಕ್ಕೆ ಬರಬಾರದು. ನದಿಗಳು ಜನರ ಬದುಕಿಗೆ ಆಸರೆಯಾಗುತ್ತದೆಯೇ ಹೊರತು ವಿಷವಾಗುವುದಿಲ್ಲ. ಭಾರತ-ಪಾಕ್ ನಡುವೆ ಸಿಂಧೂ ನದಿ ಶತಮಾನಗಳಿಂದ ಹರಿದು ಹೋಗುತ್ತಿದೆ. ಅದೇರೀತಿ ಬ್ರಹ್ಮಪುತ್ರ ಮೂರು ದೇಶಗಳಿಗೆ ಜೀವನದಿಯಾಗಿದೆ. ನದಿಗಳು ಎಂದೂ ಜನರನ್ನು ಒಡೆಯುವುದಿಲ್ಲ. ಅದನ್ನು ಬಳಸಿಕೊಂಡು ನಾವು ನಮ್ಮ ವೈಮನಸ್ಯಗಳಿಗೆ ಬೆಲೆ ಕೊಡುತ್ತೇವೆ. ಅದಕ್ಕೆ ನದಿ ಕಾರಣವಲ್ಲ. ಇದನ್ನು ಅರಿತರೆ ಮಹದಾಯಿ ವಿವಾದಕ್ಕೆ ಇರುವ ಮಹತ್ವ ತಂತಾನೇ ಕರಗಿ ಹೋಗುವುದರಲ್ಲಿ ಸಂಶಯವಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version