Home ಸುದ್ದಿ ದೇಶ ಉಪ ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿ ಘೋಷಣೆ

ಉಪ ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿ ಘೋಷಣೆ

0

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಭಾನುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ. ಜಗದೀಪ್ ಧನಕರ್ ರಾಜೀನಾಮೆ ಬಳಿಕ ಭಾರತದ ಉಪ ರಾಷ್ಟ್ರಪತಿ ಹುದ್ದೆ ತೆರವಾಗಿದ್ದು, ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಸಂಜೆ 6 ಗಂಟೆಗೆ ಆರಂಭವಾಗಿತ್ತು. ಸಂಭಾವ್ಯ ಅಭ್ಯರ್ಥಿಗಳ ಕುರಿತು ಹಲವು ಸುತ್ತಿನ ಚರ್ಚೆಯನ್ನು ನಡೆಸಿದ ಬಳಿಕ ಸಿ.ಪಿ.ರಾಧಾಕೃಷ್ಣ ಹೆಸರು ಅಂತಿಮಗೊಳಿಸಲಾಗಿದೆ.

ಈ ಹಿಂದೆ ಉಪ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈಗಲೂ ಸಹ ಅದೇ ಮಾದರಿಯನ್ನು ಅನುಸರಿಸಿದ್ದು, ಮಹಾರಾಷ್ಟ್ರ ರಾಜ್ಯಪಾಲರನ್ನು ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ.

ಸಿ.ಪಿ.ರಾಧಾಕೃಷ್ಣ ಪರಿಚಯ: ಭಾನುವಾರ ಬೆಳಗ್ಗೆ ಸಿ.ಪಿ.ರಾಧಾಕೃಷ್ಣ ಮುಂಬೈನ ಶ್ರೀ ಸಿದ್ದಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. 68 ವರ್ಷದ ಸಿ.ಪಿ.ರಾಧಾಕೃಷ್ಣ ತಮಿಳುನಾಡು ಮೂಲದವರು. ಎರಡು ಬಾರಿ ಸಂಸದರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ 2003 ರಿಂದ 2006ರ ತನಕ ಪಕ್ಷವನ್ನು ಮುನ್ನಡೆಸಿದ್ದಾರೆ.

ಸಿ.ಪಿ.ರಾಧಾಕೃಷ್ಣ ಪೂರ್ಣ ಹೆಸರು ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣ. ಅಕ್ಟೋಬರ್ 20, 1957ರಂದು ತಿರುಪ್ಪೂರ್‌ನಲ್ಲಿ ಜನಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಸಿ.ಪಿ.ರಾಧಾಕೃಷ್ಣ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಅವರು ಜುಲೈ 31, 2024ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಫೆಬ್ರವರಿ 18, 2023 ರಿಂದ ಜುಲೈ 30, 2024ರ ತನಕ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್-ಜುಲೈ 2024ರ ತನಕ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಮಾರ್ಚ್-ಆಗಸ್ಟ್ 2024ರ ತನಕ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದರು.

ಸಿ.ಪಿ.ರಾಧಾಕೃಷ್ಣ 1998 ಮತ್ತು 1999ರಲ್ಲಿ 2 ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಆರ್‌ಎಸ್‌ಎಸ್‌, ಜನಸಂಘದ ಮೂಲಕ ಅವರು ಬಿಜೆಪಿ ಸಂಪರ್ಕವನ್ನು ಪಡೆದುಕೊಂಡರು. ಪಕ್ಷ ಸೇರ್ಪಡೆಯಾದರು.

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿ.ಪಿ.ರಾಧಾಕೃಷ್ಣ 93 ದಿನಗಳ ರಥಯಾತ್ರೆಯನ್ನು ನಡೆಸಿದ್ದರು. ನದಿಗಳ ಜೋಡಣೆ, ಭಯೋತ್ಪಾದನೆ ಎದುರಿಸುವುದು ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವಂತಹ ವಿಷಯಗಳ ಮೇಲೆ ಈ ಯಾತ್ರೆಗಳು ಕೇಂದ್ರೀಕೃತವಾಗಿದ್ದವು.

ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತದಾನ ಮಾಡುತ್ತಾರೆ. ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲದ ಪ್ರಕಾರ ಅಭ್ಯರ್ಥಿ ಗೆಲುವು ಸುಲಭವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version