ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಇಳಿಕೆಯ ಪ್ರಯೋಜನವನ್ನು ವರ್ಗಾಯಿಸಲು ವಿಫಲವಾದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ಗ್ರಾಹಕರ ವ್ಯವಹಾರ ಕಾರ್ಯದರ್ಶಿ ನಿಧಿ ಖರೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಜಿಎಸ್‌ಟಿಯ ಪರಿಷ್ಕೃತ ದರ ಜಾರಿಗೆ ಬಂದ ದಿನವೇ ಕೇಂದ್ರ ಸರ್ಕಾರ ಈ ಎಚ್ಚರಿಕೆ ನೀಡಿದೆ.
ಪರಿಷ್ಕೃತ ಜಿಎಸ್‌ಟಿ ದರ ಅನುಸರಿಸದ ಕಂಪನಿಗಳನ್ನು ನ್ಯಾಯವಲ್ಲದ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳೆಂದು ಪರಿಗಣಿಸಲಾಗುತ್ತದೆ. ಪರಿಷ್ಕೃತ ದರಗಳ ಜಾರಿ ಕುರಿತು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಸಂರ್ಪೂಣ ಸಜ್ಜಾಗಿದೆ ಎಂದೂ ಅವರು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು. ಜಿಎಸ್‌ಟಿ ದರಗಳನ್ನು ಜಾರಿ ತರಲಾಗದಿರುವ ಕುರಿತು ಗ್ರಾಹಕರಿಂದ ದೂರುಗಳು ಬಂದರೆ ಅಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
- ನ್ಯಾಯವಲ್ಲದ ವ್ಯವಹಾರ ವಿರುದ್ಧ ಕ್ರಮ
- ಮೇಲ್ವಿಚಾರಣೆಗೂ ಸಜ್ಜಾದ ಸರ್ಕಾರ
- ವಸ್ತುಗಳ ಬೆಲೆ ಇಳಿಕೆಗೆ ಗ್ರಾಹಕರು ಖುಷ್
- ಮಾರುಕಟ್ಟೆಗಳಿಗೆ ಸಚಿವರು ಭೇಟಿ ನೀಡಿ ಖುದ್ದು ಪರಿಶೀಲನೆ
ನಾಗರಿಕರಿಗೆ ಪ್ರಧಾನಿ ಬಹಿರಂಗ ಪತ್ರ
ಜಿಎಸ್‌ಟಿ ದರ ಕಡಿತವನ್ನು ʻಬಚತ್ ಉತ್ಸವ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರವೂ ಬಣ್ಣಿಸಿದ್ದು ಜಿ.ಎಸ್.ಟಿ. ಕಡಿತದಿಂದ ಸಿಗುವ ವ್ಯಾವಹಾರಿಕ ಲಾಭ ಹಾಗೂ ಉಳಿತಾಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ದೇಶದ ನಾಗರೀಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ನವರಾತ್ರಿಯನ್ನು ಇಡೀ ದೇಶ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ. ಈ ಹಬ್ಬಕ್ಕೆ ಪೂರಕವಾಗಿ ಸೆ. 22 ರಿಂದ ಜಿಎಸ್‌ಟಿ ಸುಧಾರಣೆಗಳಿಗೆ ಸಂಬಂಧಿಸಿದ `ಬಚತ್ ಉತ್ಸವ್’ ಅಥವಾ ಉಳಿತಾಯದ ಹಬ್ಬ’ದ ಆಚರಣೆಯೂ ದೇಶಾದ್ಯಂತ ಆರಂಭವಾಗುತ್ತಿದೆ’ ಎಂದಿದ್ದಾರೆ.