Home ಸುದ್ದಿ ದೇಶ ನವೆಂಬರ್ 1 ರಿಂದ ಹೊಸ ರೂಲ್ಸ್: ನಿಮ್ಮ ಜೇಬು, ರೇಷನ್ ಕಾರ್ಡ್‌ ಮೇಲೆ ನೇರ ಪರಿಣಾಮ!

ನವೆಂಬರ್ 1 ರಿಂದ ಹೊಸ ರೂಲ್ಸ್: ನಿಮ್ಮ ಜೇಬು, ರೇಷನ್ ಕಾರ್ಡ್‌ ಮೇಲೆ ನೇರ ಪರಿಣಾಮ!

0

ನವದೆಹಲಿ: ಅಕ್ಟೋಬರ್ ತಿಂಗಳು ಮುಗಿದು ನವೆಂಬರ್ ಆರಂಭವಾಗುತ್ತಿದ್ದಂತೆ, ದೇಶದಾದ್ಯಂತ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುವ ಹಲವು ಮಹತ್ವದ ನಿಯಮಗಳು ಬದಲಾಗಲಿವೆ.

ಬ್ಯಾಂಕಿಂಗ್ ವ್ಯವಹಾರದಿಂದ ಹಿಡಿದು, ರೇಷನ್ ಕಾರ್ಡ್, ಆಧಾರ್ ತಿದ್ದುಪಡಿ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯವರೆಗೆ ಅನೇಕ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಯಾವುವು ಮತ್ತು ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರೇಷನ್ ಕಾರ್ಡ್‌ದಾರರಿಗೆ ಶಾಕ್: ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯಡಿ ದೇಶಾದ್ಯಂತ ಪಡಿತರ ಚೀಟಿದಾರರ ಅರ್ಹತೆಯನ್ನು ಮರುಪರಿಶೀಲಿಸಲು ಮುಂದಾಗಿದೆ. ನವೆಂಬರ್ 1 ರಿಂದ ಈ ಪ್ರಕ್ರಿಯೆ ಚುರುಕುಗೊಳ್ಳಲಿದ್ದು, ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಯಾರೆಲ್ಲಾ ಪಡಿತರ ಕಾರ್ಡ್ ಕಳೆದುಕೊಳ್ಳಬಹುದು?

ಹೆಚ್ಚಿನ ಆದಾಯ: ಸರ್ಕಾರ ನಿಗದಿಪಡಿಸಿದ ಆದಾಯದ ಮಿತಿಗಿಂತ ಹೆಚ್ಚು ಗಳಿಸುವ ಕುಟುಂಬಗಳು.

ಸರ್ಕಾರಿ ನೌಕರರು: ಸರ್ಕಾರಿ ಉದ್ಯೋಗದಲ್ಲಿರುವವರು ಅಥವಾ ಸರ್ಕಾರದ ಪಿಂಚಣಿ ಪಡೆಯುತ್ತಿರುವವರು.

ವಾಹನ ಮಾಲೀಕರು: ಸ್ವಂತ ಕಾರು (ನಾಲ್ಕು ಚಕ್ರದ ವಾಹನ) ಹೊಂದಿರುವ ಕುಟುಂಬಗಳು.

ಇತರ ಯೋಜನೆಗಳ ಫಲಾನುಭವಿಗಳು: ಸರ್ಕಾರದ ವಸತಿ ಅಥವಾ ಇತರ ದೊಡ್ಡ ಯೋಜನೆಗಳ ಲಾಭ ಪಡೆಯುತ್ತಿರುವವರು.

ಸುಳ್ಳು ಮಾಹಿತಿ ನೀಡಿದವರು: ನಕಲಿ ದಾಖಲೆ ಅಥವಾ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದವರು.

ಸರ್ಕಾರವು ಆನ್‌ಲೈನ್ ಮೂಲಕವೇ ಫಲಾನುಭವಿಗಳ ಡೇಟಾವನ್ನು ಪರಿಶೀಲಿಸಲಿದ್ದು, ಅರ್ಹತೆ ಇಲ್ಲದವರ ಪಡಿತರವನ್ನು ರದ್ದುಗೊಳಿಸಲಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ: ಬ್ಯಾಂಕಿಂಗ್ ನಿಯಮಗಳಲ್ಲೂ ಪ್ರಮುಖ ಬದಲಾವಣೆಯಾಗಲಿದೆ. ಗ್ರಾಹಕರು ಇನ್ನು ಮುಂದೆ ತಮ್ಮ ಬ್ಯಾಂಕ್ ಖಾತೆ ಅಥವಾ ಲಾಕರ್‌ಗೆ ಒಬ್ಬರಲ್ಲ, ನಾಲ್ಕು ಜನರನ್ನು ನಾಮಿನಿಯಾಗಿ (ವಾರಸುದಾರ) ನೇಮಿಸಬಹುದು.

ಅಷ್ಟೇ ಅಲ್ಲದೆ, ಪ್ರತಿಯೊಬ್ಬ ನಾಮಿನಿಗೂ ಎಷ್ಟು ಶೇಕಡಾ ಪಾಲು ಸಿಗಬೇಕು ಎಂಬುದನ್ನು ಸಹ ನಿರ್ಧರಿಸುವ ಅವಕಾಶ ನೀಡಲಾಗಿದೆ. ಒಂದು ವೇಳೆ ಮೊದಲ ನಾಮಿನಿ ಮೃತಪಟ್ಟರೆ, ಅವರ ಪಾಲು ಸ್ವಯಂಚಾಲಿತವಾಗಿ ಮುಂದಿನ ನಾಮಿನಿಗೆ ವರ್ಗಾವಣೆಯಾಗಲಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ!: ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ನಿಮ್ಮ ಜೇಬಿಗೆ ಸ್ವಲ್ಪ ಕತ್ತರಿ ಬೀಳಲಿದೆ.

ಅಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಇನ್ನು ಮುಂದೆ ಶೇ. 3.75ರಷ್ಟು ಶುಲ್ಕ ವಿಧಿಸಲಾಗುತ್ತದೆ.

CRED, CheQ, Mobikwik ನಂತಹ ಮೂರನೇ ವ್ಯಕ್ತಿಯ ಆ್ಯಪ್‌ಗಳ ಮೂಲಕ ಶಾಲಾ-ಕಾಲೇಜು ಶುಲ್ಕ ಪಾವತಿಸಿದರೆ, ಶೇ. 1ರಷ್ಟು ಹೆಚ್ಚುವರಿ ಶುಲ್ಕ ಬೀಳಲಿದೆ. ಆದರೆ, ನೇರವಾಗಿ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್ ಅಥವಾ ಪಿಒಎಸ್ ಯಂತ್ರದ ಮೂಲಕ ಪಾವತಿಸಿದರೆ ಈ ಶುಲ್ಕ ಅನ್ವಯಿಸುವುದಿಲ್ಲ.

ವ್ಯಾಲೆಟ್‌ಗೆ ರೂ.1 ಸಾವಿರಕ್ಕಿಂತ ಹೆಚ್ಚು ಹಣ ಲೋಡ್ ಮಾಡಿದರೂ ಶೇ. 1ರಷ್ಟು ಶುಲ್ಕ ವಿಧಿಸಲಾಗುತ್ತದೆ.

ಆಧಾರ್ ಅಪ್‌ಡೇಟ್ ಈಗ ಇನ್ನಷ್ಟು ಸುಲಭ: ಯುಐಡಿಎಐ ಆಧಾರ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇನ್ನು ಮುಂದೆ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಬದಲಿಸಲು ಆಧಾರ್ ಕೇಂದ್ರಕ್ಕೆ ಅಲೆಯುವ ಅಗತ್ಯವಿಲ್ಲ.

ಇವುಗಳನ್ನು ಆನ್‌ಲೈನ್‌ನಲ್ಲೇ ಅಪ್‌ಡೇಟ್ ಮಾಡಬಹುದು. ಕೇವಲ ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ವಿವರಗಳನ್ನು ಬದಲಾಯಿಸಲು ಮಾತ್ರ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

ಈ ಬದಲಾವಣೆಗಳು ಜನರ ಮೇಲೆ ನೇರ ಪರಿಣಾಮ ಬೀರಲಿದ್ದು, ಪ್ರತಿಯೊಬ್ಬರೂ ಈ ಬಗ್ಗೆ ಮಾಹಿತಿ ಹೊಂದಿರುವುದು ಅತ್ಯಗತ್ಯ.

NO COMMENTS

LEAVE A REPLY

Please enter your comment!
Please enter your name here

Exit mobile version