Home ಸುದ್ದಿ ದೇಶ ಗುರುಗ್ರಾಮದಲ್ಲಿ ಗೂಗಲ್‌ನ ಬೃಹತ್ ಕಚೇರಿ

ಗುರುಗ್ರಾಮದಲ್ಲಿ ಗೂಗಲ್‌ನ ಬೃಹತ್ ಕಚೇರಿ

0

ಗುರುಗ್ರಾಮ್: ಅಮೆರಿಕದ ಪ್ರಮುಖ ತಂತ್ರಜ್ಞಾನ ದೈತ್ಯ ಗೂಗಲ್ ಭಾರತದಲ್ಲಿ ತನ್ನ ಹೂಡಿಕೆ ಮತ್ತು ಕಚೇರಿ ವಿಸ್ತರಣೆಯನ್ನು ಮುಂದುವರಿಸುತ್ತಿದೆ. ಇತ್ತೀಚೆಗೆ ಕಂಪನಿಯು ಗುರುಗ್ರಾಮ್‌ನ ಏಟ್ರಿಯಮ್ ಪ್ಲೇಸ್‌ನಲ್ಲಿ ಸುಮಾರು 6,17,000 ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳಾವಕಾಶವನ್ನು ಗುತ್ತಿಗೆಗೆ ಪಡೆದು, 2025ರ ಭಾರತದ ಅತಿದೊಡ್ಡ ಕಚೇರಿ ಸ್ಥಳಾವಕಾಶ ಒಪ್ಪಂದಗಳಲ್ಲಿ ಒಂದನ್ನು ಸಹಿ ಹಾಕಿದೆ.

ಈ ಆಸ್ತಿಯನ್ನು ಡಿಎಲ್‌ಎಫ್ ಮತ್ತು ಹೈನ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಗೂಗಲ್‌ನ ಭಾರತ ಮಾರುಕಟ್ಟೆಯ ಮೇಲೆ ಇರುವ ವಿಶ್ವಾಸ ಮತ್ತು ದೀರ್ಘಕಾಲೀನ ವಿಸ್ತರಣಾ ತಂತ್ರವನ್ನು ಇದು ಸ್ಪಷ್ಟಪಡಿಸುತ್ತದೆ.

ಗೂಗಲ್ ತನ್ನ ಹೊಸ ಕಚೇರಿಯು NCR (ರಾಷ್ಟ್ರೀಯ ರಾಜಧಾನಿ ಪ್ರದೇಶ) ವ್ಯಾಪ್ತಿಯೊಳಗಿನ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದೆ. ಗುತ್ತಿಗೆ ಅವಧಿ ಮತ್ತು ಹಣಕಾಸು ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಈ ಒಪ್ಪಂದವು NCR ಪ್ರದೇಶದಲ್ಲಿ ಕಂಪನಿಯ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಲಯ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ.

ಈ ಹೊಸ ಒಪ್ಪಂದದ ಮೊದಲು, ಗೂಗಲ್ ಗುರುಗ್ರಾಮ್‌ನ ಮತ್ತೊಂದು ವಾಣಿಜ್ಯ ಆಸ್ತಿಯಲ್ಲಿ ಟೇಬಲ್ ಸ್ಪೇಸ್ ಎಂಬ ಕಚೇರಿ ಪೂರೈಕೆದಾರರಿಂದ 5,50,000 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶವನ್ನು ಗುತ್ತಿಗೆಗೆ ಪಡೆದಿತ್ತು. ಕೇವಲ ಕೆಲ ತಿಂಗಳೊಳಗೆ ಎರಡನೇ ದೊಡ್ಡ ಗುತ್ತಿಗೆಗೆ ಸಹಿ ಹಾಕಿರುವುದು ಭಾರತದಲ್ಲಿ ಗೂಗಲ್‌ನ ವ್ಯಾಪಾರ ವಿಸ್ತರಣೆ ವೇಗವನ್ನು ಸೂಚಿಸುತ್ತದೆ.

ಗೂಗಲ್‌ನ ಈ ಕ್ರಮವು ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version