ಬೆಂಗಳೂರು: ಕರುನಾಡಿನ ಪವರ್ ಸ್ಟಾರ್, ಕನ್ನಡಿಗರ ಪ್ರೀತಿಯ ‘ಅಪ್ಪು’ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ನಾಲ್ಕು ವರ್ಷಗಳು ಕಳೆದಿವೆ. 2021ರ ಅಕ್ಟೋಬರ್ 29, ಶುಕ್ರವಾರದ ಆ ಕರಾಳ ದಿನವನ್ನು ನೆನೆದರೆ ಇಂದಿಗೂ ಅಭಿಮಾನಿಗಳ ಎದೆ ಭಾರವಾಗುತ್ತದೆ.
ಕೇವಲ 46ನೇ ವಯಸ್ಸಿನಲ್ಲಿ, ಚಿರನಿದ್ರೆಗೆ ಜಾರಿದ ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ನಾಡು ಇಂದಿಗೂ ಮರುಗುತ್ತಿದೆ. ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಈ ದಿನ, ಜೀವನದ ಕೊನೆಯ ಕ್ಷಣಗಳು ಮತ್ತು ಅವರು ಬಿಟ್ಟುಹೋದ ಅಮೂಲ್ಯ ಪರಂಪರೆಯ ಮೆಲುಕು ಇಲ್ಲಿದೆ.
ಆ ಕರಾಳ ದಿನ ಅಕ್ಟೋಬರ್ 29, 2021 ರಂದು ನಡೆದಿದ್ದೇನು?: ಅಕ್ಟೋಬರ್ 28, 2021ರ ರಾತ್ರಿ, ಪುನೀತ್ ತಮ್ಮ ಆಪ್ತ ಸ್ನೇಹಿತ, ಸಂಗೀತ ನಿರ್ದೇಶಕ ಗುರುಕಿರಣ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ, ಎಲ್ಲರೊಂದಿಗೆ ನಗುಮೊಗದಿಂದಲೇ ಮಾತನಾಡಿದ್ದರು.
ಮಾರನೇ ದಿನ, ಅಕ್ಟೋಬರ್ 29ರಂದು, ತಮ್ಮ ಸಹೋದರ ಶಿವರಾಜ್‌ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರಕ್ಕೆ ಟ್ವಿಟರ್ ಮೂಲಕ ಶುಭ ಕೋರಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಅಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಮಧ್ಯಾಹ್ನದ ವೇಳೆಗೆ ಇಹಲೋಕ ತ್ಯಜಿಸಿದರು. ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದ, ಸದಾ ಲವಲವಿಕೆಯಿಂದ ಇರುತ್ತಿದ್ದ ಪುನೀತ್ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇಂದಿಗೂ ಸಾಧ್ಯವಾಗಿಲ್ಲ.
ಅಂದು ಜಿಮ್ ಮಾಡಿರಲಿಲ್ಲ, ಬದಲಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿದ್ದರು ಎಂದು ನಂತರ ಆಪ್ತರು ಸ್ಪಷ್ಟಪಡಿಸಿದ್ದರು. ಈ ಸುದ್ದಿ ಹೊರಬೀಳುತ್ತಿದ್ದಂತೆ, ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿತ್ತು.
ಬಹಿರಂಗಗೊಳ್ಳದ ಅಪ್ಪು ಸಮಾಜಮುಖಿ ಕಾರ್ಯಗಳು: ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಮಾಡಿದ ಸಮಾಜ ಸೇವೆಗಳ ಬಗ್ಗೆ ಎಲ್ಲೂ ಹೇಳಿಕೊಂಡವರಲ್ಲ. “ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು” ಎಂಬ ತತ್ವವನ್ನು ಅಕ್ಷರಶಃ ಪಾಲಿಸುತ್ತಿದ್ದರು. ನಿಧನದ ನಂತರವಷ್ಟೇ ಮಾಡಿದ ಹಲವಾರು ಮಹತ್ಕಾರ್ಯಗಳು ಒಂದೊಂದಾಗಿ ಬೆಳಕಿಗೆ ಬಂದವು.
ಶೈಕ್ಷಣಿಕ ಕೊಡುಗೆ: ಪುನೀತ್ ರಾಜ್ಯದಾದ್ಯಂತ 45ಕ್ಕೂ ಹೆಚ್ಚು ಉಚಿತ ಶಾಲೆಗಳು, 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು ಮತ್ತು 19 ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ‘ಜೇಮ್ಸ್’ ಚಿತ್ರದ ಚಿತ್ರೀಕರಣದ ವೇಳೆ, ಗಂಗಾವತಿಯ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಗಾಗಿ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.
ಕೋವಿಡ್ ಮತ್ತು ಪ್ರವಾಹ ಸಂದರ್ಭದ ನೆರವು: ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಅಲ್ಲದೆ, 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ 5 ಲಕ್ಷ ರೂಪಾಯಿ ನೀಡಿ ಸಂತ್ರಸ್ತರ ನೆರವಿಗೆ ಧಾವಿಸಿದ್ದರು.
ರೈತರ ಪರ ನಿಂತ ಅಪ್ಪು: ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಆರಂಭಿಸಲಾಗಿದ್ದ ‘ಫೀಡ್ ಫಾರ್ ಫಾರ್ಮರ್’ ಯೋಜನೆಗೆ ರಾಯಭಾರಿಯಾಗಿದ್ದರು.
ಗೌರವಧನ ಪಡೆಯದ ರಾಯಭಾರಿ: ತಮ್ಮ ತಂದೆಯಂತೆಯೇ, ಪುನೀತ್ ಕೂಡ ಕರ್ನಾಟಕ ಹಾಲು ಮಹಾಮಂಡಳದ ‘ನಂದಿನಿ’ ಉತ್ಪನ್ನಗಳಿಗೆ ಯಾವುದೇ ಗೌರವಧನ ಪಡೆಯದೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
‘ಗಂಧದಗುಡಿ’ ಎಂಬ ನನಸಾದ ಕನಸು: ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕದ ವನ್ಯಸಂಪತ್ತು ಮತ್ತು ಪ್ರಕೃತಿಯ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಇದರ ಫಲವಾಗಿಯೇ ‘ಗಂಧದಗುಡಿ’ ಎಂಬ ಅದ್ಭುತ ಸಾಕ್ಷ್ಯಚಿತ್ರ ರೂಪುಗೊಂಡಿತು. ಈ ಸಾಕ್ಷ್ಯಚಿತ್ರದ ಶೀರ್ಷಿಕೆಯನ್ನು ನವೆಂಬರ್ 1, 2021ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆದರೆ, ಅದಕ್ಕೂ ಮುನ್ನವೇ ನಮ್ಮನ್ನು ಅಗಲಿದ್ದು ಮಾತ್ರ ವಿಪರ್ಯಾಸ. ಅವರ ನಿಧನದ ನಂತರ, ‘ಗಂಧದಗುಡಿ’ ಬಿಡುಗಡೆಯಾಗಿ, ಕನ್ನಡಿಗರ ಮನೆಮಾತಾಯಿತು.
ಮುಂದುವರಿದಿದೆ ಪಿಆರ್‌ಕೆ ಪ್ರೊಡಕ್ಷನ್ಸ್ ಪಯಣ: ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಪುನೀತ್ ಅವರು ‘ಪಿಆರ್‌ಕೆ ಪ್ರೊಡಕ್ಷನ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಅಗಲಿಕೆಯ ನಂತರ, ಈ ಸಂಸ್ಥೆಯ ಜವಾಬ್ದಾರಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದಾರೆ.
‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಗಂಧದಗುಡಿ’, ‘ಆಚಾರ್ ಆ್ಯಂಡ್ ಕೋ’ ಮುಂತಾದ ಚಿತ್ರಗಳನ್ನು ನಿರ್ಮಿಸುವ ಮೂಲಕ ಪುನೀತ್ ಕನಸನ್ನು ನನಸು ಮಾಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಕೇವಲ ನಟರಾಗಿರಲಿಲ್ಲ, ಅವರು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ಚೇತನ. ಅವರ ನಗು, ವಿನಯ ಮತ್ತು ಸಮಾಜಮುಖಿ ಕಾರ್ಯಗಳು ಸದಾ ನಮ್ಮೊಂದಿಗೆ ಜೀವಂತವಾಗಿರುತ್ತವೆ. ಪುನೀತ್ ನೆನಪು ಅಜರಾಮರ.
