ದೆಹಲಿ: ಜನರ ಸಮಸ್ಯೆ ಆಲಿಸುವಾಗ ಸಿಎಂಗೆ ಕಪಾಳಮೋಕ್ಷ!

0
77

ನವದೆಹಲಿ: ದೆಹಲಿ ಸಿಎಂ ಜನರ ಸಮಸ್ಯೆ ಆಲಿಸುವಾಗ ದಾಳಿ ಮಾಡಲಾಗಿದೆ. ಬಿಜೆಪಿ ನಾಯಕಿ, ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ದಾಳಿಯನ್ನು ಮಾಜಿ ಸಿಎಂ, ಎಎಪಿ ನಾಯಕಿ ಅತಿಶಿ ತೀವ್ರವಾಗಿ ಖಂಡಿಸಿದ್ದಾರೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಬುಧವಾರ ತಮ್ಮ ನಿವಾಸದಲ್ಲಿ ಜನರ ಸಮಸ್ಯೆ ಆಲಿಸುವ ‘ಜನ್ ಸುನ್ವಿ’ ಕಾರ್ಯಕ್ರಮ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ದೆಹಲಿ ಬಿಜೆಪಿ ಘಟಕವೇ ಈ ಘಟನೆ ಕುರಿತು ಮಾಹಿತಿ ನೀಡಿದೆ. ಸದ್ಯ ಪೊಲೀಸರು ದೆಹಲಿ ಸಿಎಂಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತ ಯಾರು, ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ? ಎಂದು ತನಿಖೆಯನ್ನು ನಡೆಸಲಾಗುತ್ತಿದೆ.

ದೆಹಲಿಯ ಸಿವಿಲ್ ಲೈನ್‌ನಲ್ಲಿ ಸಿಎಂ ನಿವಾಸವಿದೆ. ಪ್ರತಿ ಬುಧವಾರ ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ‘ಜನ್ ಸುನ್ವಿ’ ಕಾರ್ಯಕ್ರಮ ನಡೆಸುತ್ತಾರೆ. ನೂರಾರು ಜನರು ಸಮಸ್ಯೆಗಳನ್ನು ಹೊತ್ತು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಆದರೆ ಇಂದು ‘ಜನ್ ಸುನ್ವಿ’ ಕಾರ್ಯಕ್ರಮದ ವೇಳೆ ಸುಮಾರು 33 ವರ್ಷದ ವ್ಯಕ್ತಿ ಮುಖ್ಯಮಂತ್ರಿ ರೇಖಾ ಗುಪ್ತಾಗೆ ಕಪಾಳಮೋಕ್ಷ ಮಾಡಿದನು. ತಕ್ಷಣ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಮೇಲಿನ ದಾಳಿಯನ್ನು ದೆಹಲಿ ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ದೆಹಲಿ ಬಿಜೆಪಿ ಘಟಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ‘ಅಚಾತುರ್ಯದ ಘಟನೆಯೊಂದು ‘ಜನ್ ಸುನ್ವಿ’ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿಗಳ ಸಿವಿಲ್ ಲೈನ್ ನಿವಾಸದಲ್ಲಿ ನಡೆದಿದೆ. ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸ್ ತನಿಖೆಯಿಂದ ವಿವರ ಹೊರಬರಲಿದೆ’ ಎಂದು ಹೇಳಿದೆ.

ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್, ‘ಇಂತಹ ಘಟನೆ ದುರದೃಷ್ಟಕರವಾಗಿದೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪ್ರಶ್ನೆ ಮಾಡುವಂತೆ ಮಾಡಿದೆ. ರಾಷ್ಟ್ರದ ರಾಜಧಾನಿಯಲ್ಲಿ ಮುಖ್ಯಮಂತ್ರಿಗಳೇ ಸುರಕ್ಷಿತವಲ್ಲ ಎಂದರೆ ಜನ ಸಾಮಾನ್ಯರ ಕಥೆ ಏನು?’ ಎಂದು ಪ್ರಶ್ನೆ ಮಾಡಿದ್ದಾರೆ.

2025ರ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆದಿತ್ತು. ರೇಖಾ ಗುಪ್ತ ರಾಷ್ಟ್ರ ರಾಜಧಾನಿಯ 4ನೇ ಹಾಗೂ ಬಿಜೆಪಿಯ 2ನೇ ಮಹಿಳಾ ಸಿಎಂ ಆಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಪ್ರಥಮ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ರೇಖಾ ಗುಪ್ತಾರನ್ನು ಬಿಜೆಪಿ ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಅಚ್ಚರಿಯನ್ನು ಮೂಡಿಸಿತ್ತು.

27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರವನ್ನು ಪಡೆದಿದೆ. ಈ ಹಿಂದೆ ದಿ.ಸುಷ್ಮಾ ಸ್ವರಾಜ್ ಬಿಜೆಪಿಯಿಂದ ದೆಹಲಿ ಮುಖ್ಯಮಂತ್ರಿಯಾಗಿದ್ದರು. 2025ರ ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ಪುನಃ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಮಹಿಳೆಯ ಕೈಗೆ ನೀಡಿದೆ.

ಕಾಂಗ್ರೆಸ್‌ನ ಶೀಲಾ ದೀಕ್ಷಿತ್, ಬಿಜೆಪಿಯ ಸುಷ್ಮಾ ಸ್ವರಾಜ್, ಎಎಪಿಯ ಅತಿಶಿ ಮಹಿಳಾ ಮುಖ್ಯಮಂತ್ರಿಗಳಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ನಡೆಸಿದ್ದಾರೆ. ಈಗ ರೇಖಾ ಗುಪ್ತಾ ಅಧಿಕಾರವನ್ನು ನಡೆಸುತ್ತಿದ್ದಾರೆ.

Previous articleಧರ್ಮಸ್ಥಳ: ಸತ್ಯವೇ ಗೆಲ್ಲುತ್ತದೆ ಸಂಚು ಸಾಯುತ್ತದೆ: ವೀರೇಂದ್ರ ಹೆಗ್ಗಡೆ
Next articleದರ್ಶನ್: “ದಿ ಡೆವಿಲ್” ಸಿನಿಮಾದ ಹಾಡಿನ ಬಿಡುಗಡೆ ದಿನಾಂಕ ರಿವಿಲ್

LEAVE A REPLY

Please enter your comment!
Please enter your name here