Delhi blast : ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣವು ಕೇವಲ ಒಂದು ಅಪಘಾತವಲ್ಲ, ಅದೊಂದು ವ್ಯವಸ್ಥಿತ ಸಂಚು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗುತ್ತಿದೆ.
ಇದು ಸಿಎನ್‌ಜಿ ಸ್ಫೋಟವಿರಬಹುದೆಂಬ ಆರಂಭಿಕ ಶಂಕೆಗಳನ್ನು ಪೊಲೀಸರು, ಇದೀಗ 10 ಅಮಾಯಕರನ್ನು ಬಲಿ ಪಡೆದ ಈ ಕೃತ್ಯದ ಹಿಂದೆ ಉಗ್ರರ ಕೈವಾಡವನ್ನು ಪತ್ತೆಹಚ್ಚಿದ್ದಾರೆ. ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿ, ಸ್ಫೋಟಗೊಂಡ ಹ್ಯುಂಡೈ ಐ20 ಕಾರಿನ 11 ಗಂಟೆಗಳ ಭಯಾನಕ ಪಯಣದ ಜಾಡನ್ನು ಪತ್ತೆಹಚ್ಚುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.
ಸಿಸಿಟಿವಿ ಕಣ್ಣಲ್ಲಿ ಸೆರೆಯಾದ ಸಾವಿನ ಸಂಚು: ಸ್ಫೋಟ ಸಂಭವಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು, ಘಟನಾ ಸ್ಥಳದಿಂದ ಹಿಮ್ಮುಖವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಆರಂಭಿಸಿದರು. ಆಗಲೇ ಈ ಕೃತ್ಯಕ್ಕೆ ಫರಿದಾಬಾದ್ ನೋಂದಣಿಯ ಐ20 ಕಾರನ್ನು ಬಳಸಲಾಗಿದೆ ಎಂಬುದು ಖಚಿತವಾಗಿದ್ದು. ಅಲ್ಲಿಂದ ಮುಂದೆ, ಈ ‘ಸಾವಿನ ದೂತ’ ತನ್ನ ಪಯಣವನ್ನು ಎಲ್ಲಿಂದ ಆರಂಭಿಸಿತು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆಗಿಳಿದಾಗ, ಒಂದು ಭಯಾನಕ ಪಿತೂರಿಯ ಚಿತ್ರಣವೇ ಅನಾವರಣಗೊಂಡಿದೆ.
ಕಾರಿನ ಆತಂಕಕಾರಿ ಓಡಾಟದ ಜಾಡು.
- ಬೆಳಗ್ಗೆ 7:30: ಕಾರು ಮೊದಲ ಬಾರಿಗೆ ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆ ಬಳಿ ಕಾಣಿಸಿಕೊಂಡಿದೆ.
- ಬೆಳಗ್ಗೆ 8:13: ಬದರ್‌ಪುರ್ ಟೋಲ್ ಪ್ಲಾಜಾ ದಾಟಿ, ಕಾರು ಅಧಿಕೃತವಾಗಿ ದೆಹಲಿಯ ಗಡಿಯನ್ನು ಪ್ರವೇಶಿಸಿದೆ.
- ಬೆಳಗ್ಗೆ 8:20: ಓಖ್ಲಾ ಕೈಗಾರಿಕಾ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಕಾರು ಹಾದುಹೋಗಿದೆ.
- ಮಧ್ಯಾಹ್ನ 3:19: ಹಲವು ಗಂಟೆಗಳ ನಂತರ, ಕಾರು ಕೆಂಪುಕೋಟೆಯ ಸುನೆಹ್ರಿ ಮಸೀದಿ ಬಳಿಯ ಪಾರ್ಕಿಂಗ್‌ಗೆ ಪ್ರವೇಶಿಸಿ, ಸುಮಾರು ಮೂರು ಗಂಟೆಗಳ ಕಾಲ ನಿಗೂಢವಾಗಿ ಅಲ್ಲಿಯೇ ನಿಂತಿತ್ತು.
- ಸಂಜೆ 6:22: ಪಾರ್ಕಿಂಗ್‌ನಿಂದ ಹೊರಬಂದ ಕಾರು, ನಿಧಾನವಾಗಿ ಕೆಂಪುಕೋಟೆಯ ಜನನಿಬಿಡ ಪ್ರದೇಶದತ್ತ ಸಾಗಿದೆ.
- ಸಂಜೆ 6:52: ಚಲಿಸುತ್ತಿರುವಾಗಲೇ, ಕೇವಲ 24 ನಿಮಿಷಗಳ ನಂತರ, ಭೀಕರ ಸ್ಫೋಟ ಸಂಭವಿಸಿ ಎಲ್ಲವೂ ಕ್ಷಣಾರ್ಧದಲ್ಲಿ ಅಂತ್ಯವಾಗಿದೆ.
ಉಗ್ರರ ನಂಟು, 8 ಶಂಕಿತರ ಬಂಧನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಶಂಕಿತರನ್ನು ಬಂಧಿಸಲಾಗಿದ್ದು, ಇವರಲ್ಲಿ ವೈದ್ಯರು ಸೇರಿದ್ದಾರೆ ಎನ್ನಲಾಗಿದೆ. ಬಂಧಿತರಿಗೆ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್‌ನಂತಹ ಕುಖ್ಯಾತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿರುವ ಪ್ರಬಲ ಶಂಕೆ ವ್ಯಕ್ತವಾಗಿದೆ. ಕಾರಿನ ಮಾಲೀಕ ಸಲ್ಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನು ಕಾರನ್ನು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.
ಆದರೆ, ತನಿಖಾಧಿಕಾರಿಗಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯೆಂದರೆ, ಆ ಕಾರು ಮೂರು ಗಂಟೆಗಳ ಕಾಲ ಪಾರ್ಕಿಂಗ್‌ನಲ್ಲಿ ಏಕೆ ನಿಂತಿತ್ತು? ಬೇರೆ ಸ್ಥಳದಲ್ಲಿ ಸ್ಫೋಟ ನಡೆಸುವ ಯೋಜನೆ ಇತ್ತೇ? ಅಥವಾ ತಮ್ಮ ಸಹಚರರು ಸಿಕ್ಕಿಬಿದ್ದ ಕಾರಣ, ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಲಾಯಿತೇ? ಈ ಎಲ್ಲಾ ನಿಗೂಢ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತನಿಖೆ ಮುಂದುವರಿದಿದೆ.

























