Home ಸುದ್ದಿ ದೇಶ ಬುಲೆಟ್‌ ಟ್ರೈನ್ ಶೀಘ್ರ ಆರಂಭ: ಎರಡೇ ಗಂಟೆಗಳಲ್ಲಿ ಮುಂಬೈ-ಅಹಮದಾಬಾದ್ ಪಯಣ

ಬುಲೆಟ್‌ ಟ್ರೈನ್ ಶೀಘ್ರ ಆರಂಭ: ಎರಡೇ ಗಂಟೆಗಳಲ್ಲಿ ಮುಂಬೈ-ಅಹಮದಾಬಾದ್ ಪಯಣ

0

ಭಾವನಗರ: “ಭಾರತದ ಮೊಟ್ಟ ಮೊದಲ ಬುಲೆಟ್‌ ರೈಲು ಸೇವೆ ಶೀಘ್ರ ಆರಂಭವಾಗಲಿದೆ” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

“ಮುಂಬೈ ಹಾಗೂ ಅಹಮದಾಬಾದ್ ನಡುವೆ ಈ ಮೊದಲ ಬುಲೆಟ್‌ ರೈಲು ಸೇವೆ ಆರಂಭವಾಗಲಿದ್ದು, ಈ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕೇವಲ ಎರಡು ಗಂಟೆ ಏಳು ನಿಮಿಷವಾಗಲಿದೆ” ಎಂದು ಅವರು ತಿಳಿಸಿದ್ದಾರೆ.

ಗುಜರಾತ್‌ನ ಭಾವನಗರ ರೈಲು ನಿಲ್ದಾಣದಲ್ಲಿ ಆಯೋಧ್ಯಾ ಎಕ್ಸ್‌ಪ್ರೆಸ್‌, ರೇವಾ-ಪುಣೆ ಎಕ್ಸ್‌ಪ್ರೆಸ್‌ ಮತ್ತು ಜಬಲ್‌ಪುರ-ರಾಯ್‌ಪುರ ಎಕ್ಸ್‌ಪ್ರೆಸ್‌ ರೈಲುಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿದ ಬಳಿಕ ಅವರು ಈ ಮಾಹಿತಿಯನ್ನು ಹಂಚಿಕೊಂಡರು. “ಬುಲೆಟ್‌ ರೈಲು ಯೋಜನೆಯ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲಿಯೇ ರೈಲು ಸೇವೆ ಆರಂಭವಾಗಲಿದೆ” ಎಂದರು.

“ಭಾರತದ ಮೊದಲ ಬುಲೆಟ್ ರೈಲು ಇದಾಗಿದ್ದು, ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋಮೀಟರ್ ದೂರ ಸಂಚರಿಸಲಿದೆ. ಈ ರೈಲು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪ್ರದೇಶದಿಂದ ಪ್ರಯಾಣವನ್ನು ಆರಂಭಿಸಿವಾಗಿ ಗುಜರಾತ್‌ನ ವಾಪಿ, ಸೂರತ್, ಆನಂದ್, ವಡೋದರಾ ಮಾರ್ಗವಾಗಿ ಅಹಮದಾಬಾದ್‌ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಎರಡು ನಗರಗಳ ಮಧ್ಯದ 508 ಕಿಮೀ ದೂರವನ್ನು ಬುಲೆಟ್‌ ರೈಲು ಕೇವಲ 2 ಗಂಟೆ ಏಳು ನಿಮಿಷದಲ್ಲಿ ಕ್ರಮಿಸಲಿದೆ. ರೈಲು ಪ್ರತಿ ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸುತ್ತದೆ” ಎಂದು ಸಚಿವರು ಹೇಳಿದರು.

“ಗುಜರಾತ್‌, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಹೊಸ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿದಿನ ಅಂದಾಜು 12 ಕಿಮೀ ಹೊಸ ರೈಲ್ವೆ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರಕಾರದ 11 ವರ್ಷಗಳ ಅವಧಿಯಲ್ಲಿ ಸಮಾರು 34 ಸಾವಿರ ಕಿಮೀ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. ಇದು ಹಿಂದೆಂದೂ ಮಾಡಲಾಗದ ಸಾಧನೆಯಾಗಿದೆ” ಎಂದು ಅವರು ಹೇಳಿದರು.

“ಗುಜರಾತ್‌ನಲ್ಲಿ ಪೋರಬಂದರ್ ಮತ್ತು ರಾಜ್‌ಕೋಟ್ ನಡುವಿನ ಹೊಸ ರೈಲು, ಪೋರಬಂದರ್ ನಗರದಲ್ಲಿ ರೈಲ್ವೆ ಫ್ಲೈಓವರ್ ಮತ್ತು ಎರಡು ಗತಿ ಶಕ್ತಿ ಸರಕು ಟರ್ಮಿನಲ್‌ಗಳು ನಿರ್ಮಾಣ, ರಣವಾವ್ ನಿಲ್ದಾಣದಲ್ಲಿ 135 ಕೋಟಿ ರೂ.ಗಳ ಕೋಚ್ ನಿರ್ವಹಣಾ ಸೌಲಭ್ಯ ಅಲ್ಲದೇ ಭಾವನಗರದಲ್ಲಿ ಕಂಟೇನರ್ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಇನ್ನು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಎರಡೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರಗಳು ವೇಗವಾಗಿ ಕೆಲಸ ಮಾಡುತ್ತಿವೆ” ಎಂದರು.

“ಭಾರತದಲ್ಲಿನ ಪ್ರಸ್ತುತ 1,300 ರೈಲು ನಿಲ್ದಾಣಗಳನ್ನು ನವೀಕರಿಸುವ ಕಾರ್ಯ ನಡೆದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಲ್ಲಾ ನಿಲ್ದಾಣಗಳು ಮತ್ತು ರೈಲುಗಳನ್ನು ಸ್ಥಗಿತಗೊಳಿಸಿ ರೈಲ್ವೆ ನಿಲ್ದಾಣಗಳ ನವೀಕರಿಸುವ ಕಾರ್ಯ ಮಾಡಲಾಗುತ್ತದೆ. ಆದರೆ, ಅಪಾರ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ರೈಲು ನಿಲ್ದಾಣಗಳು ನವೀಕರಣಗೊಳ್ಳಬೇಕು ಎಂಬ ಕನಸಿನೊಂದಿಗೆ ಈ ಸವಾಲುಗಳನ್ನು ಸ್ವೀಕರಿಸಿದ್ದೇವೆ” ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version