ಹುಬ್ಬಳ್ಳಿ: “ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ ರೇವಣ್ಣಗೆ ಜೈಲು ಶಿಕ್ಷೆ ಆಗಿದ್ದು ಕೋರ್ಟ್ ಆದೇಶ ಪಾಲಿಸಲೇಬೇಕು. ಈ ಪ್ರಕರಣದಿಂದ ಬಿಜೆಪಿಗೇಕೆ ಮುಜಗರ ಆಗಬೇಕು” ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
“ಈ ಪ್ರಕರಣದಲ್ಲಿ ನ್ಯಾಯಾಲಯ ಸಮಗ್ರ ವಿಚಾರಣೆ ನಡೆಸಿ ತೀರ್ಪು ನೀಡಿದೆ. ನಾನು ಸೇರಿದಂತೆ ನಮ್ಮ ನಾಯಕರು ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿದ್ದೇವೆ. ನಮ್ಮ ಪ್ರತಿಕ್ರಿಯೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೋಡಿಲ್ಲ, ಓದಿಲ್ಲ ಎಂದಾದರೆ ನಾವು ಏನು ಮಾಡಲು ಬರುವುದಿಲ್ಲ” ಎಂದು ಹೇಳಿದ್ದಾರೆ.
“ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂಟು ಹೊಂದಿರುವುದನ್ನು ನಾವು ಬಿಚ್ಚಿಡಬೇಕಾಗುತ್ತದೆ” ಎಂದು ಹೇಳಿದರು.
ತನಿಖೆ ವರದಿ ಬರಲಿ: “ಧರ್ಮಸ್ಥಳ ಸುತ್ತಮುತ್ತ ನಡೆದ ಪ್ರಕರಣಗಳ ಕುರಿತು ರಾಜ್ಯ ಸರಕಾರ ರಚಿಸಿರುವ ಎಸ್‌ಐಟಿ ತನಿಖೆ ವರದಿ ಹೊರಬರಲಿ. ತನಿಖೆಯನ್ನು ವೀರೇಂದ್ರ ಹೆಗ್ಗಡೆಯವರೂ ಸ್ವಾಗತಿಸಿದ್ದಾರೆ. ಧರ್ಮಸ್ಥಳ ನಾಡಿನ ಪ್ರಮುಖ ಶ್ರದ್ಧಾಕೇಂದ್ರ ಅದರ ಬಗ್ಗೆ ಅಪ್ರಚಾರ ಬೇಡ. ಹಿಂದು ವಿರೋಧಿ ಮನಸ್ಥಿತಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ” ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.
ಕಾಂಗ್ರೆಸ್‌ನವರಿಗೆ ಉದ್ಯೋಗ ಇಲ್ಲ: “ಕಾಂಗ್ರೆಸ್ ಪಕ್ಷದ ನಾಯಕರ ನಿಲುವು, ಹೇಳಿಕೆಗಳು ದೇಶಕ್ಕೆ ಗಂಡಾಂತರಕಾರಿಯಾಗಿದೆ. ಮೂರ್ಖತನದ ಹೇಳಿಕೆಗಳನ್ನು ನೀಡುವ ಮುನ್ನ ಯೋಚನೆ ಮಾಡಬೇಕು. ಈಗ ಬೆಂಗಳೂರಿನಲ್ಲಿ ಪ್ರತಿಭಟನೆ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನವರಿಗೆ ಉದ್ಯೋಗ ಇಲ್ಲ” ಎಂದು ಜೋಶಿ ಟೀಕಿಸಿದರು.
ಕಾಂಗ್ರೆಸ್ ಗೆದ್ದರೆ ಅಕ್ರಮ ಇಲ್ಲ: “ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮನಸ್ಥಿತಿ ಸರಿಯಾಗಿಲ್ಲ. ಇನ್ನು ಮುಂದೆ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದೇವೆ. ಚುನಾವಣೆಯಲ್ಲಿ ಮತ ಕಳ್ಳತನ ಎಂದು ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಭಾರತದಲ್ಲಿಲ್ಲ ಎಂಬಂತೆ ಬಿಂಬಿಸುವ ಹುನ್ನಾರ ಕಾಂಗ್ರೆಸ್ ನಡೆಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅಕ್ರಮ ಇಲ್ಲ. ಕಾಂಗ್ರೆಸ್ ಸೋತರೆ ಅಲ್ಲೆಲ್ಲ ಚುನಾವಣಾ ಅಕ್ರಮ. ಇದೆಂಥ ಧೋರಣೆ? ಅಕ್ರಮವಾಗಿದ್ದರೆ ತಕ್ಷಣಕ್ಕೆ ಯಾಕೆ ಆಯೋಗಕ್ಕೆ ದೂರು ಕೊಡಲಿಲ್ಲ? ಚುನಾವಣೆಗೆ ಸಂಬಂಧಿಸಿದಂತೆ 11 ಸಾವಿರ ಆಕ್ಷೇಪ ಅರ್ಜಿಗಳು ಬಂದಿದ್ದವು. ಕಾಂಗ್ರೆಸ್ ಮಾತ್ರ ಒಂದೂ ಅರ್ಜಿ ಸಲ್ಲಿಸಿರಲಿಲ್ಲವೇಕೆ?” ಎಂದು ಸಚಿವ ವಾಗ್ದಾಳಿ ನಡೆಸಿದರು.
ಮಹದಾಯಿ ನಮ್ಮಿಂದಲೇ ಅಗಿದ್ದು: ಮಹಾದಾಯಿ ಯೋಜನೆಗೆ ಸಂಬಂಧಿಸಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ಹಿಂಪಡೆದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಈ ಹಿಂದೆ ಡಿ.ಕೆ. ಶಿವಕುಮಾರ ಭೇಟಿಯಾದಾಗ ಸಲಹೆ ನೀಡಿದ್ದೇನೆ. ಯೋಜನೆ ಅನುಷ್ಠಾನಕ್ಕೆ 500 ಹೆಕ್ಟೇರ್ ಅರಣ್ಯ ನಾಶವಾಗುತ್ತದೆ ಎಂಬ ಕಾರಣಕ್ಕೆ, ಪೈಪ್ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಕೇವಲ 50 ಹೆಕ್ಟೇರ್ ಅರಣ್ಯ ಮಾತ್ರ ಬೇಕಾಗುತ್ತದೆ. ಇದನ್ನು ಅನುಸರಿಸುವ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆ ಮಾಡಿದ್ದು, ಅವರು ಸಹ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು. ಮಹದಾಯಿಗೆ ಸಂಬಂಧಿಸಿದ ಎಲ್ಲಾ ಧನಾತ್ಮಕ ಬೆಳವಣಿಗೆ ಬಿಜೆಪಿಯಿಂದಲೇ ಆಗಿದೆ ಎಂದು ತಿಳಿಸಿದರು.