Home ತಾಜಾ ಸುದ್ದಿ ೪೦% ಕಮಿಷನ್ ಸಾಬೀತಿಗೆ ಸಾಕ್ಷ್ಯದ ಸಂಕಷ್ಟ

೪೦% ಕಮಿಷನ್ ಸಾಬೀತಿಗೆ ಸಾಕ್ಷ್ಯದ ಸಂಕಷ್ಟ

0

ಕೆ.ವಿ.ಪರಮೇಶ್
ಬೆಂಗಳೂರು
: ಕಳೆದ ಅಸೆಂಬ್ಲಿ ಚುನಾವಣೆ ವೇಳೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಧ್ವನಿಸಿದ್ದ ೪೦% ಕಮಿಷನ್ ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹವೇ ತನಿಖಾ ಸಮಿತಿಗೆ ದೊಡ್ಡತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ನಿವೃತ್ತ ನ್ಯಾಯಾಧೀಶರೇ ತನಿಖಾ ಸಮಿತಿ ಸಾರಥ್ಯ ವಹಿಸಿರುವ ಹಿನ್ನೆಲೆಯಲ್ಲಿ ದಾಖಲೆಗಳ ಸಹಿತ ಆರೋಪ ದೃಢಪಡಿಸಲು ವಿಶೇಷ ಕಾರ್ಯವಿಧಾನ(ಮೆಥಡಾಲಜಿ) ಅನುಸರಿಸಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ೪೦% ಕಮಿಷನ್ ಆರೋಪವೂ ಪ್ರಮುಖ ಪಾತ್ರ ವಹಿಸಿತ್ತು. ೨೦೧೯-೨೦೨೩ರವರೆಗೆ ಬಿಜೆಪಿ ಆಡಳಿತದಲ್ಲಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಪ್ರಮುಖ ಆರು ಇಲಾಖೆಗಳ ಟೆಂಡರ್, ಕಾಮಗಾರಿ ಗುತ್ತಿಗೆ, ಅನುದಾನ ಬಳಕೆ ಮೊದಲಾದ ಕುರಿತು ತನಿಖೆ ನಡೆಸಲು ನಿರ್ಧರಿಸಿದ್ದ ಕಾಂಗ್ರೆಸ್ ಸರ್ಕಾರ ಇದಕ್ಕೆಂದೇ ನ್ಯಾ.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯ ತನಿಖಾ ಸಮಿತಿ ರಚಿಸಿತ್ತು. ೨೦೨೪ರ ಮೇ ಅಂತ್ಯದೊಳಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಹಗರಣದ ಹೂರಣ ಹೊರಕ್ಕೆ
ಆರೋಪ ಕೇಳಿ ಬಂದಿದ್ದ ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳ ಕುರಿತು ತನಿಖೆ ನಡೆಸಲು ಸಮಿತಿಗೆ ತಿಳಿಸಲಾಗಿತ್ತು. ಆದರೆ ಹೊಣೆಗಾರಿಕೆ ವಹಿಸಿಕೊಂಡಿದ್ದ ನ್ಯಾ.ದಾಸ್ ಅವರಿಗೆ ಇದಕ್ಕೆ ಅಗತ್ಯವಾಗಿ ಬೇಕಾಗಿದ್ದ ಅಧಿಕಾರಿವರ್ಗ, ಸಿಬ್ಬಂದಿಗಳನ್ನು ನೀಡಿರಲಿಲ್ಲ. ಆದರೂ ಸೀಮಿತ ಸವಲತ್ತುಗಳ ನಡುವೆ ಸಮರೋಪಾದಿಯಲ್ಲಿ ತನಿಖೆ ನಡೆದಿದೆ. ಮೂಲಗಳ ಮಾಹಿತಿಯಂತೆ ಈವರೆಗೆ ಸಂಬಂಧಿತ ಇಲಾಖೆಗಳ ೩.೬೦ ಲಕ್ಷದಷ್ಟು ಕಾಮಗಾರಿ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ವಾಸ್ತವವಾಗಿ ಇವುಗಳ ಪರಾಮರ್ಶೆಗೆ ವರ್ಷಗಳೇ ಬೇಕಾಗುತ್ತದೆ. ಆದರೆ ಸೇವಾಬದ್ಧತೆ ಪ್ರದರ್ಶಿಸಿರುವ ಸಮಿತಿ ಹಗರಣದ ಹೂರಣ ಹೊರಗೆಳೆಯುವಲ್ಲಿ ನಿರತವಾಗಿದೆ.
ಹೆಚ್ಚುವರಿ ಕೆಲಸದ ಹೊಣೆ
೪೦% ಕಮಿಷನ್ ಹಗರಣದ ತನಿಖೆ ನಡೆಸುತ್ತಿದ್ದ ವೇಳೆಯೇ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಗಳ ತನಿಖೆಯನ್ನು, ಎಸ್‌ಐಟಿಯಿಂದ ದಾಸ್ ಸಮಿತಿಗೆ ಹಸ್ತಾಂತರಿಸಿತ್ತು. ಜೊತೆಗೆ ನಾರಾಯಣ ಎಡದಂಡೆ ನಾಲೆ ಕಾಮಗಾರಿ ಅವ್ಯವಹಾರ ಆರೋಪದ ತನಿಖೆ ಸಹಾ ಇದೇ ಸಮಿತಿಗೆ ಬಂದಿದೆ. ಸರ್ಕಾರದ ಸೂಚನೆಯಂತೆ ಎಲ್ಲದರ ತನಿಖೆ ಮುಗಿಸಿ ಮೇ ಅಂತ್ಯಕ್ಕೆ ಅಂತಿಮವರದಿ ಸಲ್ಲಿಸಬೇಕಿದೆ. ಆದರೆ ವಾಸ್ತವವಾಗಿ ಇದು ಕಷ್ಟಸಾಧ್ಯ ಎನ್ನಲಾಗಿದೆ. ಹಾಗಾಗಿಯೇ ತನಿಖೆಗೆ ಮತ್ತಷ್ಟು ಕಾಲಾವಕಾಶ ಅಗತ್ಯವಿದ್ದು ಸಮಿತಿಯ ಅಧಿಕಾರಾವಧಿ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆಯಲು ಸಮಿತಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಗುತ್ತಿಗೆದಾರರಿಂದಲೇ ಆರೋಪ
ರಾಜ್ಯ ಗುತ್ತಿಗೆದಾರರ ಸಂಘವೇ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ೪೦% ಕಮಿಷನ್ ಆರೋಪ ಮಾಡಿತ್ತು. ಕೈಗೆ ಅಧಿಕಾರಕ್ಕೆ ಸಿಕ್ಕಿದ ಬಳಿಕ ಕೊಟ್ಟ ಭರವಸೆಯಂತೆ ತನಿಖೆಗೆ ವಹಿಸಿತ್ತು. ಬಳಿಕ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಸಂಘದ ನಿಯೋಗ ತನಿಖಾ ಸಮಿತಿ ಭೇಟಿಯಾಗಿ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲಾತಿಗಳನ್ನು ನೀಡಿತ್ತು. ಜೊತೆಗೆ ಕೆಲವು ಸಾರ್ವಜನಿಕರೂ ಕೂಡಾ ಸಮಿತಿಗೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದಾಖಲೆ ನೀಡಿದ್ದಾರೆಂದು ಹೇಳಲಾಗಿದ್ದು, ಇವೆಲ್ಲವನ್ನೂ ಕ್ರೋಢೀಕರಿಸಿ ತನಿಖೆ ನಡೆಸಲಾಗುತ್ತಿದೆ.

Exit mobile version