Home News ಹನ್ನೊಂದಕ್ಕೆ ದೊರೆತದ್ದು ಶೂನ್ಯ

ಹನ್ನೊಂದಕ್ಕೆ ದೊರೆತದ್ದು ಶೂನ್ಯ

ಮೋದಿ ಸರ್ಕಾರ ಹನ್ನೊಂದು ವರ್ಷ ಪೂರೈಸಿದ್ದು ಕೇವಲ ಪ್ರಚಾರದಿಂದ ಅಷ್ಟೇ ಅವರ ಸರಕಾರಕ್ಕೆ 10ರಲ್ಲಿ ಶೂನ್ಯ ಅಂಕ ನೀಡುತ್ತೇನೆ

ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಪ್ರಚಾರದಿಂದ ಬದುಕಿರುವುದು. ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ? ಅಚ್ಚೆ ದಿನ್ ಆಯೇಗಾ ಎಂದರು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು, ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು, ಇವೆಲ್ಲಾ ಆಗಿದೆಯಾ? ಕೊನೆಗೆ ಕೇಂದ್ರ ಸರ್ಕಾರದ ವಿರುದ್ಧ ರೈತರೇ ಒಂದು ವರ್ಷ ಕಾಲ ಚಳುವಳಿಯನ್ನು ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದು 11 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮೋದಿಯವರು ಪ್ರಮುಖವಾಗಿ ಏನು ಹೇಳಿದ್ದರೋ ಅದನ್ನೇ ಮಾಡಿಲ್ಲ. ತಮ್ಮ ಸರ್ಕಾರಕ್ಕೆ ಹನ್ನೊಂದು ವರ್ಷ ತುಂಬಿಸಿದ್ದಾರೆ ಅಷ್ಟೇ. ಮಾಧ್ಯಮಗಳು ಅವರಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಅವುಗಳ ಮೂಲಕ ಸುಳ್ಳು ವಿಚಾರಗಳಿಗೆ ಅವರು ಪ್ರಚಾರ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದವರು ಅದನ್ನೇ ನಕಲು ಮಾಡಿ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಜಾರಿ ಮಾಡಿದರು. ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶೇ.50ರಷ್ಟು ತೆರಿಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಅವರೇ ಪ್ರಧಾನಿಗಳಾದಾಗ ಏನು ಮಾಡಿದರು? ನಿರ್ಮಲಾ ಸೀತಾರಾಮನ್ ಅವರು ₹5,300 ಕೋಟಿಗಳನ್ನು ರಾಜ್ಯಕ್ಕೆ ಕೊಡುವುದಾಗಿ ಘೋಷಿಸಿ ಕೊಡಲಿಲ್ಲ. 15ನೇ ಹಣಕಾಸು ಆಯೋಗದವರು ಕರ್ನಾಟಕಕ್ಕೆ ₹11,495 ಕೋಟಿ ಕೊಡಬೇಕು ಎಂದು ಶಿಫಾರಸ್ಸು ಮಾಡಿದರೂ ಕೊಡಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರದಿಂದ ನರೇಗಾ ಕೆಲಸದ ಕೂಲಿ ಹಣವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರವೇ ಮೊದಲು ಅನುದಾನ ನೀಡಿ ಕೆಲಸ ಮಾಡಿ, ಕೇಂದ್ರ ಕೊಟ್ಟಾಗ ಇಸ್ಕೊಳ್ಳುವಂತಹ ಪರಿಸ್ಥಿತಿ ನಡೆದುಕೊಂಡು ಹೋಗುತ್ತಿದೆ. ರಾಜ್ಯ ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು, ಅಪಪ್ರಚಾರ ಮಾಡುತ್ತಿದ್ದಾರೆ. ಪೊಲೀಸ್‌ ಇಲಾಖೆಯ ವಿರುದ್ಧ ಹಲವು ಬಾರಿ ಪ್ರತಿಭಟನೆ ಮತ್ತು ಆರೋಪ ಮಾಡುತ್ತಿದ್ದ ಬಿಜೆಪಿ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಈಗ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಪ್ರೀತಿ ಬಂದಿದೆ. ಮೇಲ್ನೋಟಕ್ಕೆ ಯಾರೆಲ್ಲಾ ತಪ್ಪಿತಸ್ಥರಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ಜರುಗಿಸಿದ್ದೇವೆ. ವಿಪಕ್ಷಗಳು ಒತ್ತಾಯ ಮಾಡಿದಂತೆ ನ್ಯಾಯಾಂಗ ತನಿಖೆಗೂ ವಹಿಸಿದ್ದೇವೆ. ಆದರೆ ಅವರು ಇನ್ನೂ ಇದೇ ವಿಷಯದಲ್ಲಿ ರಾಜಕೀಯ ಮಾಡುತ್ತಾ ಕೂತಿದ್ದಾರೆ ಎಂದರು.

Exit mobile version