Home ಅಪರಾಧ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ

0

ಬೆಂಗಳೂರು: ಆಜಾನ್ ಕೂಗುವ ಸಮಯದಲ್ಲಿ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕುತ್ತಿದ್ದಾನೆ ಎಂದು ಆರೋಪಿಸಿ ಮೂವರು ಯುವಕರು ಮೊಬೈಲ್ ಅಂಗಡಿ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಿದ್ದಣ್ಣಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ರವಿವಾರ ಸಂಜೆ ನಡೆದಿದೆ.
ಹಲ್ಲೆಯಲ್ಲಿ ತೀವ್ರ ಗಾಯಗೊಂಡ ಅಂಗಡಿ ಮಾಲೀಕ ಮುಕೇಶ್‌ನನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿ­ಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಠಾಣೆ ಪೊಲೀಸರು. ಸುಲೇಮಾನ್, ಶಹನವಾಜ್ ಹಾಗೂ ರೋಹಿತ್ ಎಂಬುವವರನ್ನು ಬಂಧಿಸಿದ್ದಾರೆ.
ದಿ. ೧೭ ರಂದು ಸಂಜೆ ೭.೩೦ರ ಸುಮಾರಿಗೆ ಜುಮ್ಮಾ ಮಸೀದಿಯಲ್ಲಿ ಆಜಾನ್ ಕೂಗಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ತನ್ನ ಅಂಗಡಿಯಲ್ಲಿ ಕುಳಿತಿದ್ದ ಮುಕೇಶ್ ಕುಳಿತಿದ್ದ. ಏಕಾಏಕಿ ಬಂದ ಮೂವರು ನೀನು ಆಜಾನ್ ಕೂಗುವ ಸಮಯದಲ್ಲಿ ಹನುಮಾನ ಚಾಲೀಸಾ ಹಾಕಿದ್ದೀಯ ಎಂದು ಜಗಳಕ್ಕೆ ನಿಂತರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆ ಮೂವರು ಯುವಕರು ಮುಕೇಶನನ್ನು ಹೊರಗೆ ಎಳೆದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಠಾಣೆ ಮುಂದೆ ಪ್ರತಿಭಟನೆ… :
ಘಟನೆ ನಡೆದ ಕೂಡಲೇ ನೂರಾರು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಲಸೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಉದ್ದೇಶಪೂರ್ವಕವಾಗಿ ಈ ಹಲ್ಲೆ ನಡೆಸಲಾಗಿದೆ. ಈ ಮುಂಚೆಯೂ ಅವರು ಮುಕೇಶನನ್ನು ದುರುಗುಟ್ಟಿ ನೋಡಿಕೊಂಡು ತಿರುಗುತ್ತಿದ್ದರು. ಹನುಮಾನ ಚಾಲೀಸಾ ಹಾಕಿದ್ದು ಅಂಗಡಿಯ ಹೊರಗೂ ಕೇಳುತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಠಾಣಾ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಕಳುಹಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಭೇಟಿ:
ವಿಕ್ಟೋರಿಯಾ ಆಸ್ಪತ್ರೆಗೆ ಸಂಸದರಾದ ತೇಜಸ್ವಿಸೂರ್ಯ, ಪಿ.ಸಿ. ಮೋಹನ್, ಶಾಸಕ ಉದಯ ಗರುಡಾಚಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಮುಕೇಶನ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಡಿಗೇಡಿಗಳ ಪರ ನಿಲ್ಲುವ ಕೆಲಸವಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಮೊಬೈಲ್ ಅಂಗಡಿಗೆ ನುಗ್ಗಿ ಹಿಂದು ಯುವಕನನ್ನು ಎಳೆದಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಮುಕೇಶ್ ಹಿಂದಿ ಭಾಷಿಕನಾಗಿದ್ದು ಕನ್ನಡ ಅಷ್ಟಾಗಿ ಬರುವುದಿಲ್ಲ. ಪೊಲೀಸರು ಹನುಮಾನ್ ಚಾಲಿಸಾ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿದ್ದಾರೆ.

Exit mobile version