ಸಿದ್ದರಾಮಯ್ಯ ಈಗಲಾದರೂ ಸತ್ಯ ಮಾತನಾಡಲಿ
ಹುಬ್ಬಳ್ಳಿ: ಕೇಂದ್ರ ಸರ್ಕಾರ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಚಿಂತನೆಯಡಿ ಬಜೆಟ್ ಮಂಡನೆ ಮಾಡಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಒಂದು ಸಮುದಾಯದವರಿಗಾಗಿ ಬಜೆಟ್ ಮಂಡನೆ ಮಾಡಿದೆ. ಹೀಗಾಗಿ ಇದೊಂದು ಹಲಾಲ್ ಬಜೆಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ೬ ಕೋಟಿ ಜನರಿಗಾಗಿ ಬಜೆಟ್ ಮಂಡಿಸುವ ಬದಲು ಕೇವಲ ಬೆರಳೆಣಿಕೆಯಷ್ಟಿರುವ ಸಮುದಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ಇದನ್ನು ಹಲಾಲ್ ಬಜೆಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಇದೇನು ಪಾಕಿಸ್ತಾನ ಎಂದುಕೊಂಡಿದ್ದೀರಾ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಆದರೆ, ಭಾರತ ಸರ್ಕಾರ ಸಾಲ ಮಾಡಿದ್ದರೂ ಅದು ಆರ್ಥಿಕ ಬಾಹ್ಯ ಶಿಸ್ತಿನಲ್ಲಿದೆ ಎಂಬುದನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಸಿದ್ದರಾಮಯ್ಯ ಅವರೇ ಹೇಳಿದಂತೆ ಇದು ಅವರ ಕೊನೆಯ ಚುನಾವಣೆ. ಈಗಲಾದರೂ ಅವರು ಸತ್ಯ ಮಾತನಾಡಲಿ. ಯಾರನ್ನು ಮೂರ್ಖರನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದಂತಿದೆ ಕಾಂಗ್ರೆಸ್ ನಡೆ, ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರೀ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಮಾತ್ರ ವಿದೇಶಿ ಶಿಕ್ಷಣ ಪಡೆಯಬೇಕಾ? ಅವರಿಗೆ ಮಾತ್ರ ೫೦ ಲಕ್ಷ ಮೀಸಲಿರಿಸಿದ್ದೀರಿ. ಬೇರೆ ಸಮುದಾಯದಲ್ಲಿ ಬಡ ವಿದ್ಯಾರ್ಥಿಗಳು ಇಲ್ಲವೆ? ಎಂದು ಪ್ರಶ್ನಿಸಿರುವ ಜೋಶಿ ಇಂತಹ ತುಷ್ಠೀಕರಣ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ.
ಅಂಗನವಾಡಿ ಪೌಷ್ಠಿಕ ಆಹಾರ ಪದಾರ್ಥ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನ ವಿಚಾರವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಪೊಲೀಸ್ ಕಮಿಷನರ್ ಶಶಿಕುಮಾರ್ ಮೇಲೆ ಗೂಬೆ ಕೂರಿಸಿದ್ದಾರೆ. ಇದು ಸದನದ ಕಡತದಲ್ಲಿ ದಾಖಲಾಗಿದೆ. ಆದರೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಯಾರ ಒತ್ತಡಕ್ಕೆ ಮಣಿದಿದ್ದಾರೆ ಗೊತ್ತಿಲ್ಲ. ಇದಕ್ಕೆ ಎನ್. ಶಶಿಕುಮಾರ ಅವರೇ ಉತ್ತರಿಸಬೇಕು. ಆರೋಪಿ ಬೇರೆ ಸಮುದಾಯದವರಾಗಿದ್ದರೆ ಇಷ್ಟೊತ್ತಿಗೆ ಬಂಧನ ಆಗಿರುತ್ತಿತ್ತು. ಆರೋಪಿಯ ಬಂಧನದ ವಿಚಾರದಲ್ಲಿ ಕಾಂಗ್ರೆಸ್ ತುಷ್ಠೀಕರಣ ಮಾಡುತ್ತಿದೆ. ಪ್ರಮುಖ ಆರೋಪಿಯ ಬಂಧನ ಮಾಡಿದ್ರೆ ಮಹಾನ್, ಮಾಹಾನ್ ನಾಯಕರು ಹೆಸರು ಹೊರ ಬರುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವೇ ಒತ್ತಡ ಹಾಕಿರಬಹುದು. ಹೀಗಾಗಿ ಪ್ರಮುಖ ಆರೋಪಿ ಇನ್ನೂ ಬಂಧನವಾಗಿಲ್ಲ ಎಂದರು.