Home ತಾಜಾ ಸುದ್ದಿ ಶೀಘ್ರದಲ್ಲೇ ೩೦೦ ಎಸ್‌ಡಿಎ ಎಫ್‌ಡಿಎ ಹುದ್ದೆ ಭರ್ತಿಗೆ ಕ್ರಮ

ಶೀಘ್ರದಲ್ಲೇ ೩೦೦ ಎಸ್‌ಡಿಎ ಎಫ್‌ಡಿಎ ಹುದ್ದೆ ಭರ್ತಿಗೆ ಕ್ರಮ

0

ಬೆಂಗಳೂರು: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಜಿಲ್ಲಾವಾರು ಹಂಚಿಕೆ ಕುರಿತು ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಮಟ್ಟದಲ್ಲಿ ಲಿಪಿಲ ವೃಂದದ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಈ ಹಿಂದೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಅದರಂತೆ ಆರ್ಥಿಕ ಇಲಾಖೆಯು ೨೦೨೩ರ ನ.೨ರಂದು ೧೦೦ ಪ್ರಥಮ ದರ್ಜೆ ಸಹಾಯಕ ಹಾಗೂ ೨೦೦ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡಿತ್ತು. ಈಗ ಈ ಹುದ್ದೆಗಳನ್ನು ಜಿಲ್ಲಾ ಪಂಚಾಯಿತಿಯಲ್ಲಿ ನೇರ ನೇಮಕಾತಿ ಕೋಟಾದಡಿ ಮಂಜೂರಾದ ಖಾಲಿ ಇರುವ ಹುದ್ದೆಗಳ ಆಧಾರ ಮೇಲೆ ಹಂಚಿಕೆ ಮಾಡಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಅಧಿಸೂಚನೆ ಹೊರಡಿಸಿದೆ.
ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸೇರಿದಂತೆ ಬಾಗಲಕೋಟೆ-೭, ಬೆಂಗಳೂರು ಗ್ರಾಮಾಂತರ-೩, ಬೆಂಗಳೂರು ನಗರ-೬, ದಕ್ಷಿಣ ಕನ್ನಡ-೧೯, ಬೆಳಗಾವಿ-೫, ಚಿಕ್ಕಮಗಳೂರು-೧೯, ಚಿತ್ರದುರ್ಗ-೮, ವಿಜಯಪುರ-೧೭, ಚಾಮರಾಜನಗರ-೧೩, ದಾವಣಗೆರೆ-೯, ಧಾರವಾಡ-೮, ಗದಗ-೧೪, ಹಾಸನ-೨೦, ಹಾವೇರಿ-೧೭, ಕೊಡಗು-೧೧, ಕೋಲಾರ-೧೦, ಮಂಡ್ಯ-೧೩, ಮೈಸೂರು-೧೩, ಶಿವಮೊಗ್ಗ-೧೬, ತುಮಕೂರು-೧೯, ಉಡುಪಿ-೧೩, ಚಿಕ್ಕಬಳ್ಳಾಪುರ-೯, ರಾಮನಗರ-೯, ಉತ್ತರಕನ್ನಡ-೨೨ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಲಾಗಿದೆ.
ಮೇಲಿನ ಹುದ್ದೆಗಳಿಗೆ ಮೀಸಲಾತಿ ರೋಸ್ಟರ್ ಬಿಂದುಗಳನ್ನು ಗುರುತಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮುಖೇನ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಪ್ರಸ್ತಾವನೆಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸುವಂತೆ ಕ್ರಮ ಕೈಗೊಂಡು ೧೫ ದಿನದೊಳಗೆ ಅನುಪಾಲನ ವರದಿಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

೫೦೪ ಹುದ್ದೆ ಭರ್ತಿಗೆ ಸಮ್ಮತಿ
ರಾಜ್ಯ ಸರ್ಕಾರದ ೧೬ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ ಸೇರಿದಂತೆ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ೬೫೬ ಹುದ್ದೆಗಳ ಪೈಕಿ ೫೦೪ ಹುದ್ದೆಗಳನ್ನು ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ.
ಈ ಕುರಿತು ವಿಧಾನ ಪರಿಷತ್‌ನಲ್ಲಿ ನಿರಾಣಿ ಹಣಮಂತ್ ರುದ್ರಪ್ಪ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

Exit mobile version