ಶಿಗ್ಗಾವಿ(ಗ್ರಾಮೀಣ): ತಾಲೂಕಿನ ಶಿಶುನಾಳ ಗ್ರಾಮದ ಪಂಚಾಗ್ನಿ ಮಠದಲ್ಲಿ ಶಾಂತಿ ಸೌಹಾರ್ದತೆಯ ಭಾವೈಕ್ಯದ ತಾಣವಾದ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಮಹಾ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ನೆರವೇರಿತು.
ವಿವಿಧ ಜಿಲ್ಲೆಗಳಿಂದ ದೂರ ದೂರ ಗ್ರಾಮಗಳಿಂದ ತಂಡೋಪತಂಡವಾಗಿ ಭಕ್ತರು ಆಗಮಿಸಿದ್ದರು.
ಕನ್ನಡ ಸಾಹಿತ್ಯವನ್ನು ಶ್ರೀಮಂತ ಹಾಗೂ ವೈವಿಧ್ಯಮಯವನ್ನಾಗಿ ಮಾಡಿದ ಸತ್ಪುರುಷ ಶರೀಫ ಶಿವಯೋಗಿಗಳು ಸರಳ ಸಾಲುಗಳಲ್ಲಿ ಸರ್ವ ಧರ್ಮದ ತಿರುಳು ಒಂದೇ ಎಂದು ಸಾರಿದವರು. ಪ್ರತಿ ವರ್ಷ ನಡೆಯುವ ಅವರ ಜಾತ್ರಾ ಮಹೋತ್ಸವದಂದು ಮಹಾರಥೋತ್ಸವಕ್ಕೆ ಎತ್ತಿನ ಬಂಡಿ ಮೂಲಕ ಹರಿದು ಬಂದ ಸಾವಿರಾರು ಭಕ್ತರಲ್ಲಿ ಅನೇಕರು ಚಿಲುಮೆ ಸೇವನೆ ಮಾಡಿ ಶರೀಫರನ್ನು ಸ್ಮರಿಸಿದ್ದು ಸಾಮಾನ್ಯವಾಗಿತ್ತು.
ಶರೀಫ ಗಿರಿಯಲ್ಲಿ ಬೆಳಿಗ್ಗೆಯಿಂದ ಧಾರ್ಮಿಕ ವಿಧಿವಿಧಾನಗಳ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಭಕ್ತಿಯಿಂದ ಕಟ್ಟಿಕೊಂಡು ಬಂದ ಅನ್ನದ ಬುತ್ತಿಯನ್ನೆ ಪ್ರಸಾದ ರೂಪದಲ್ಲಿ ನೀಡುತ್ತಾರೆ.
ಸಂಜೆ ನಡೆದ ಮಹಾರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿಶ್ವಸ್ಥ ಸಮಿತಿ ಧರ್ಮದರ್ಶಿಗಳು, ಜನಪ್ರತಿನಿಧಿಗಳು ಹಾಗೂ ಮಠಾಧೀಶರುಗಳು ಪಾಲ್ಗೊಂಡಿದ್ದರು.