ದಾವಣಗೆರೆ: ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಹಾಗೂ ಜೀವನಾಂಶಕ್ಕಾಗಿ ಪ್ರಕರಣ ದಾಖಲಾಗಿಸಿದ್ದ 28 ಜೋಡಿಗಳು, ಹರಿಹರ, ಚನ್ನಗರಿ ಹಾಗೂ ಜಗಳೂರು ತಾಲ್ಲೂಕು ನ್ಯಾಯಾಲಯದಲ್ಲಿ ತಲಾ ಒಂದು ಜೋಡಿ ಸೇರಿ ಒಟ್ಟು 31 ಜೋಡಿಗಳು ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ.
ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಒಂದಾಗಲು ನಿರ್ಧರಿಸಿದ ಜೋಡಿಗಳು ನ್ಯಾಯಾಧೀಶರು, ವಕೀಲರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿನ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಚ್. ಅಣ್ಣಯ್ಯನವರ, ಗಾಳಿ ಜೀವನಕ್ಕೆ ಎಷ್ಟು ಹಿತಕರವೋ ಗಾಳಿ ಮಾತು ಅಷ್ಟೇ ಅಪಾಯ. ಹೀಗಾಗಿ ಗಾಳಿ ಮಾತುಗಳಿಗೆ ಕಿವಿಕೊಟ್ಟು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ದಂಪತಿಗಳಿಗೆ ಕಿವಿ ಮಾತು ಹೇಳಿದರು.
ನಮ್ಮ ಐದೂ ಬೆರಳು ಒಂದೇ ರೀತಿ ಇರುವುದಿಲ್ಲ. ಆದರೆ ಊಟ ಮಾಡುವಾಗ ಎಲ್ಲವೂ ಒಂದಾಗುತ್ತವೆ. ಅದೇ ರೀತಿ ಪತಿ-ಪತ್ನಿ ಸ್ವಾಭಿಮಾನ, ಅಹಂಕಾರ ಬದಿಗಿಟ್ಟು ಒಂದಾಗಿ ಬಾಳಬೇಕು. ನಿಮ್ಮಲ್ಲಿ ವಿರಸ ಬಂದು, ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ನಿಮ್ಮನ್ನು ನೋಡಿ ಖುಷಿ ಪಡುವವರೇ ಹೆಚ್ಚು. ಇದೀಗ ನೀವು ಅಂತವರ ಮುಂದೆ ಒಂದಾಗಿ ಬಾಳಿರಿ ಎಂದು ಹೇಳಿದರು.
ಶ್ರಮ ವಹಿಸಿ ಕೆಲಸ ಮಾಡಿರಿ. ಹಣ ಉಳಿತಾಯ ಮಾಡಿ. ಆದರೆ ಹೆಚ್ಚಿನ ಅತಿ ಆಸೆ ಇರಬಾರದು. ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು. ವಿಚ್ಛೇದನಕ್ಕೆ ನಿರ್ಧರಿಸಿದ್ದ ದಂಪತಿಗಳನ್ನು ಒಂದುಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದು ಇದೇ ವೇಳೆ ಶ್ಲ್ಯಾಘಿಸಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪ್ಪ ಗಂಗಪ್ಪ ಸಲಗೆರೆ ಮಾತನಾಡಿ, ನಮ್ಮ ದೇಶದಲ್ಲಿ ಮದುವೆಗೆ ಪವಿತ್ರ ಸ್ಥಾನವಿದೆ. ದಾಂಪತ್ಯ ಜೀವನದಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ. ಬೇರೆ ದೇಶದಲ್ಲಿ ವಿವಾಹಗಳು ಪಾವಿತ್ರ್ಯತೆ ಉಳಿಸಿಕೊಂಡಿಲ್ಲ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿ ಭಾರತದಲ್ಲಿಯೂ ಹೆಚ್ಚುತ್ತಿರುವುದು ಕಳವಳಕಾರಿ ಎಂದರು.
ಪತಿ-ಪತ್ನಿಯರದ್ದು ಪವಿತ್ರವಾದ ಬಂಧನವಾಗಿದೆ. ಸಂಪ್ರದಾಯ ಬಿಡದೆ ದೇಶದ ಪರಂಪರೆ ಉಳಿಸಿಕೊಂಡು ಹೋಗಬೇಕು. ಸಣ್ಣ ಪುಟ್ಟ ವ್ಯತ್ಯಾಸಗಳು ಸಹಜ. ಅದು ಉಂಡು ಮಲಗುವ ವರೆಗೆ ಮಾತ್ರ ಇರಬೇಕು. ಬದುಕಿನಲ್ಲಿ ನೆಮ್ಮದಿ ಮುಖ್ಯ. ಅದಕ್ಕಾಗಿ ದಂಪತಿಗಳು ಪರಸ್ಪರ ಅನ್ಯೋನ್ಯವಾಗಿರಬೇಕು ಎಂದರು.
ತಂದೆ-ತಾಯಿ, ಅತ್ತೆ-ಮಾವ ಯಾರೇ ಆಗಿರಲಿ ಹಿರಿಯರಿಗೆ ಗೌರವ ಕೊಡುವುದು ಮುಖ್ಯ. ನಿಮ್ಮ ಹೊಸ ಬದುಕು ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಒಂದಾದ ದಂಪತಿಗಳಿಗೆ ಹಿತ ನುಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್ ಮಾತನಾಡಿ, ಹಲವಾರು ಕಾರಣಗಳಿಂದಾಗಿ ಬೇರೆಯಾಗಲು ನಿರ್ಧರಿಸಿದ್ದವರನ್ನು ಒಂದು ಮಾಡುವಲ್ಲಿ ವಕೀಲರ ಸಂಘದ ಸದಸ್ಯರು ನಿರಂತರ ಶ್ರಮ ವಹಿಸುತ್ತಿದ್ದಾರೆ ಎಂದರು.
ವಿಚ್ಛೇದನ ಕೋರಿ ಬಂದವರು ಹಾಗೂ ಅವರ ಹಿರಿಯರನ್ನು ಕರೆಯಿಸಿ, ಮನವೊಲಿಸುವ ಮೂಲಕ ಒಂದು ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ವಕೀಲರು ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿಯೇ ದಾವಣಗೆರೆ ಕೌಟುಂಬಿಕ ನ್ಯಾಯಾಲಯವು ಹೊಸ ಆದರ್ಶ ಹುಟ್ಟು ಹಾಕಿದೆ ಎಂದರು.
ಮಕ್ಕಳ ಸ್ನೇಹಿ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಸಂಧಾನಕಾರರಾದ ಗೀತಾ, ಹಿರಿಯ ವಕೀಲರಾದ ಜಗದೀಶ್, ಮಲ್ಲಿಕಾರ್ಜುನ್ ಕಣವಿ, ಮಹಾಭಲೇಶ್ವರ್, ಎಚ್.ಎನ್. ರಾಜಶೇಖರಪ್ಪ, ಮಂಜುನಾಥ್ ಇತರರು ಈ ಸಂದರ್ಭದಲ್ಲಿದ್ದರು.