ಕಲಬುರಗಿ: ಪತ್ರಿಕೆಗಳು ಕೇವಲ ವ್ಯಕ್ತಿ ಅಥವಾ ಕುಟುಂಬದ ಸ್ವತ್ತಲ್ಲ. ಅವು ಸಮಾಜದ ಸ್ವತ್ತು. ಅದರಲ್ಲೂ 94 ವರ್ಷಗಳಿಂದ ಸುದೀರ್ಘವಾಗಿ ನಿಖರ ಸುದ್ದಿ, ವಸ್ತುನಿಷ್ಠ ವರದಿ ಹಾಗೂ ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿರುವ ಸಂಯುಕ್ತ ಕರ್ನಾಟಕ ಪತ್ರಿಕೆ ಶತಮಾನವನ್ನು ಪೂರೈಸುವ ಮೂಲಕ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾರೈಸಿದರು.
ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣ ಸಂಯುಕ್ತ ಕರ್ನಾಟಕ' ಪತ್ರಿಕೆಯ ಕಲಬುರಗಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಹೊಸ ಜೇವರ್ಗಿ ರಸ್ತೆಯ ಖಮಿತಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿರುವ
ಕಲ್ಯಾಣ ಸಿರಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ದೇಶದಲ್ಲೇ ಧಾರ್ಮಿಕ ದತ್ತಿಯಡಿ ನಡೆಯುತ್ತಿರುವ ಮೂರು ಪತ್ರಿಕೆಗಳಲ್ಲಿ ಸಂಯುಕ್ತ ಕರ್ನಾಟಕವೂ ಒಂದು. ವಸ್ತುನಿಷ್ಠ ವರದಿಗಳ ಮೂಲಕ 94 ವರ್ಷಗಳ ಸುದೀರ್ಘ ಅವಧಿಯಲ್ಲಿ ನಾಡಿನ ಮನೆ, ಮನಗಳ ಮಾತಾಗಿರುವ ಪತ್ರಿಕೆ, ಓದುಗರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. ಪ್ರಚಲಿತ ವಿದ್ಯಮಾನಗಳ ಜೊತೆಗೆ ಜನರಿಗೆ ಅಂಧಶ್ರದ್ಧೆಗಳನ್ನು ತಲುಪಿಸದಿರುವುದೇ ಸಂಯುಕ್ತ ಕರ್ನಾಟಕ ಪತ್ರಿಕೆಯ ಯಶಸ್ಸಿನ ಗುಟ್ಟು. ಇಂತಹ ಮಹಾನ್ ಪತ್ರಿಕೆಯನ್ನು ಓದುಗರು ಇನ್ನಷ್ಟು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ಪತ್ರಿಕೆಗಳು ಯಾವತ್ತೂ ಸತ್ಯವನ್ನೇ ಬರೆಯಬೇಕು. ಆಧುನಿಕ ಸಮಾಜ ಮತ್ತು ಪೈಪೋಟಿಯ ಭರಾಟೆಯಲ್ಲಿ ಸತ್ಯವನ್ನು ಮರೆಮಾಚುತ್ತ ಹೋದರೆ ಅಂಧಶ್ರದ್ಧೆಗಳ ಪ್ರಚಾರವಾಗಿ, ಜನರ ಜ್ಞಾನಕ್ಕೆ ಕೊಡಲಿಪೆಟ್ಟು ನೀಡಿದಂತಾಗುತ್ತದೆ. ಈ ಬಗ್ಗೆ ಎಲ್ಲ ಪತ್ರಿಕೆಗಳು ಗಮನ ಹರಿಸಬೇಕು. ಈತನ್ಮಧ್ಯೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತೀರ ವಿರಳವಾಗಿದೆ. ಮಕ್ಕಳು, ಯುವಜನತೆಯಲ್ಲಿ ಮೊಬೈಲ್ ಘೀಳು ಹೆಚ್ಚಾಗಿರುವುದರಿಂದ ಓದಿನ ಆಸಕ್ತಿ ಕ್ಷೀಣಿಸುತ್ತಿದೆ. ಮೊಬೈಲ್, ದೂರದರ್ಶನದತ್ತ ಆಕರ್ಷಣೆಯಾಗದೇ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಷಯ, ಸಂಪಾದಕೀಯಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಮಾನವೀಯ ಮೌಲ್ಯಗಳೂ ಅಭಿವೃದ್ಧಿಯಾಗುತ್ತವೆ ಎಂದು ವಿವರಿಸಿದರು.
ಪತ್ರಿಕೆಗಳಿಂದ ಮಾತ್ರ ಭಾಷಾ ಸಾಹಿತ್ಯದ ಬೆಳವಣಿಗೆ ಸಾಧ್ಯ. ಪತ್ರಿಕೆಗಳನ್ನು ನಿರಂತರ ಓದುವುದರಿಂದ ಶಾಲೆ ಕಲಿಯದವನೂ ಜ್ಞಾನಿಯಾಗಬಹುದು. ಅಂತೆಯೇ ದಿನಪತ್ರಿಕೆ, ಸಾಹಿತ್ಯ ಹಾಗೂ ಇತರೆ ಪುಸ್ತಕಗಳನ್ನು ಓದದ ಕಾರಣಕ್ಕೆ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳು ಶಿಕ್ಷಣದಲ್ಲಿ ಹಿಂದೆ ಬಿದ್ದಿವೆ. ಮತ್ತು ಇದೇ ಕಾರಣಗಳಿಂದಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ನಮ್ಮವರು ಕೊನೇಯ ಸ್ಥಾನದಲ್ಲಿ ಇರುತ್ತಾರೆ. ಕಲ್ಯಾಣ ಕರ್ನಾಟಕ, ಹೈದ್ರಾಬಾದ್ ಕಾರ್ನಾಟಕದ ಜನರಿಗೆ ಕಲಂ ೩೭೧(ಜೆ) ವರದಾನವಾಗಿದ್ದು, ಶಿಕ್ಷಣದ ಕೊರತೆಯಂದ ಅದನ್ನು ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಈ ಭಾಗದ ಶಿಕ್ಷರು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಹೋರಾಟಗಾರರು ಒಟ್ಟಾಗಿ ಶಿಕ್ಷಣಕ್ಕೆ ಆಧ್ಯತೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ಲೋಕ ಶಿಕ್ಷಣ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಯು.ಬಿ. ವೆಂಕಟೇಶ, ಶರಣರ ಮತ್ತು ಸೂಫಿ ಸಂತರ ನಾಡಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳೂ ಯಶಸ್ವಿಯಾಗಿವೆ. ಇದಕ್ಕೆ ಓದುಗರ ಆಶೀರ್ವಾದವೇ ಕಾರಣ. ಸ್ವಾತಂತ್ರ್ಯ ಹೋರಾಟದ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮೊಹರೆ ಹನುಮಂತರಾಯರು ಮತ್ತು ದಿವಾಕರ್ ಅವರು ಜೈಲಿನಲ್ಲಿದ್ದುಕೊಂಡೇ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಹೊರತರುತ್ತಿದ್ದರು. ಹೀಗಾಗಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಮಹತ್ವದ ಘಟನೆಗಳಿಗೆ ಸಂಯುಕ್ತ ಕರ್ನಟಕ ಸಾಕ್ಷಿಯಾಗಿದೆ ಎಂದರು.
೧೯೯೯ರಲ್ಲಿ ದಿ. ಎಸ್.ಎಂ. ಕೃಷ್ಣಾ ಮುಖ್ಯಮಂತ್ರಿಯಾಗಿದ್ದಾಗ ಅಂದು ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಧರ್ಮಸಿಂಗ್ ಅವರ ಸಹಕಾರ ಮತ್ತು ಸಹಾಯದಿಂದ ಕಲಬುರಗಿಯಲ್ಲಿ ನೂತನ ಆವೃತ್ತಿಯನ್ನು ತೆರೆಯಲಾಯಿತು. ಅಂದಿನಿಂದ ಇಂದಿನವರೆಗೆ ಅನೇಕ ಚಳವಳಿ, ಘಟನಾವಳಿಗಳನ್ನು ದಾಖಲಿಸುತ್ತ, ೨೫ ವಸಂತಗಳನ್ನು ಪೂರೈಸುವ ಮೂಲಕ ನಾಡಿನ ಸಾಕ್ಷಿಪ್ರಜ್ಞೆ ಆಗಿದೆ. ಕನ್ನಡಿಗರ ಮನೆ ಮಾತಾಗಿರುವ ನಾವು, ಮಾಧ್ಯಮ ಲೋಕದಲ್ಲಿ ಪರಂಪರೆಯ ಭವಿಷ್ಯದ ಜೊತೆಗೆ ಅರಿವಿನ ಲೋಕದ ನಂದಾದೀಪ ಬೆಳಗುವುದೇ ನಮ್ಮ ಸಂಕಲ್ಪ. ಮಾತ್ರವಲ್ಲದೇ ಪತ್ರಿಕೆಯ ಏಳಿಗೆಗೆ ಹಾಲಿ ಮತ್ತು ಮಾಜಿ ಧರ್ಮದರ್ಶಿಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಣಿ ಅಮ್ಮ, ಜನರನ್ನು ಬುದ್ಧಿವಂತರನ್ನಾಗಿ ಮಾಡಿ, ನಾಡಿನ ನೆಲ,ಜಲ ಸಂರಕ್ಷಣೆ ವಿಷಯದಲ್ಲಿ ಒಂದುಗೂಡಿಸುವ ಕೆಲಸ ಮಾಡುತ್ತಿರುವ ಸಂಯುಕ್ತ ಕರ್ನಾಟಕ ಸಹ ಕಲ್ಯಾಣ ಸಿರಿ ಇದ್ದಂತೆ. ಸ್ವಾತಂತ್ರ್ಯ ಹೋರಾಟದಲ್ಲಿ ಅನುಪಮ ಪಾತ್ರ ವಹಿಸಿದ ಸಂಯುಕ್ತ ಕರ್ನಾಟಕ ದೇಶದ ಸಂಸ್ಕೃತಿ, ಸಾಹಿತ್ಯ, ಮೌಲಿಕ ವಿಚಾರಗಳನ್ನು ಹಾಗೂ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಜನರನ್ನು ಬುದ್ಧಿವಂತರನ್ನಾಗಿ ಮಾಡಿ, ಜನಪರ ವಿಷಯದಲ್ಲಿ ಸದಾ ಜನರನ್ನು ಎಚ್ಚರಿಸುವ ಕಾರ್ಯದಲ್ಲಿ ಸಂಯುಕ್ತ ಕರ್ನಾಟಕ ಸಕ್ರೀಯವಾಗಿ ತೊಡಗಿಸಿಕೊಂಡಿದೆ. ಸಂಯುಕ್ತ ಕರ್ನಾಟಕದ ಕಲಬುರ್ಗಿ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಲಿಂ.ಶರಣಬಸವೇಶ್ವರ ಅಪ್ಪ ಸಾಕ್ಷಿಯಾಗಿದ್ದರು, ಈಗ ಈ ಆವೃತ್ತಿಯ ರಜತ ಮಹೋತ್ಸವ ಸಂಭ್ರಮ ನಡೆಯುತ್ತಿದೆ ಎಂದರು.
ಈ ಭಾಗದ ಹಿರಿಯ ಮುತ್ಸದ್ಧಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನದ ೩೭೧ ಜೆ ಕಲಂ ಜಾರಿ, ಕಲಬುರ್ಗಿಯಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ, ಅತ್ಯಾಧುನಿಕ ಇಎಸ್‌ಐ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿಮಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಮಹಾಬಲ ಸೀತಾಳಭಾವಿ ಹಾಗೂ ಸಿಇಒ ಮತ್ತು ಕಾರ್ಯನಿರ್ವಾಹಕ ಸಂಪಾದಕರಾದ ಮೋಹನ ಹೆಗಡೆ, ಸಂಪಾದಕೀಯ ಸಲಹೆಗಾರ ಹುಣಸವಾಡಿ ರಾಜನ್ ಅವರು ವೇದಿಕೆಯ ಮೇಲಿದ್ದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ, ಗೌರವ ಸಮರ್ಪಿಸಿದರು. ಮಮತಾ ಜೋಶಿ ಪ್ರಾರ್ಥಿಸಿದರು. ಕು.ರಾಜೇಶ್ವರಿ ನಾಡಗೀತೆ ಪ್ರಸ್ತುತಪಡಿಸಿದರು. ನರೇಂದ್ರ ಬಡಶೇಷಿ ಹಾಗೂ ಜಯಲಕ್ಷ್ಮೀ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಮೋಹನ ಹೆಗಡೆ ವಂದಿಸಿದರು.