Home ಸುದ್ದಿ ರಾಜ್ಯ ನಮಾಜ್‌ಗೆ ನಿಷೇಧ: ಸಿಎಂಗೆ ಯತ್ನಾಳ್ ಪತ್ರ; ಶುರುವಾಗಿದೆ ಹೊಸ ಚರ್ಚೆ!

ನಮಾಜ್‌ಗೆ ನಿಷೇಧ: ಸಿಎಂಗೆ ಯತ್ನಾಳ್ ಪತ್ರ; ಶುರುವಾಗಿದೆ ಹೊಸ ಚರ್ಚೆ!

0

ರಾಜ್ಯದಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳು, ಸರ್ಕಾರಿ ಆವರಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜ್‌ಗಳನ್ನು ನಿಷೇಧಿಸುವಂತೆ ಯತ್ನಾಳ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ, ಸರ್ಕಾರಿ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಹೇಳಿತ್ತು. ಈ ಸಂಬಂಧ “ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್ ಪ್ರಾಪರ್ಟೀಸ್ ಬಿಲ್ 2025″ರ ಕರಡು ಸಿದ್ಧವಾಗುತ್ತಿದೆ ಎಂಬ ವರದಿಗಳೂ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಯತ್ನಾಳ್ ಈ ಪತ್ರವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಯತ್ನಾಳ್ ಪತ್ರದ ಪ್ರಮುಖ ಅಂಶಗಳು

ಸಂಚಾರಕ್ಕೆ ಅಡಚಣೆ: ಅನುಮತಿಯಿಲ್ಲದೆ ರಸ್ತೆಗಳು ಮತ್ತು ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುವುದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಡಚಣೆಯಾಗುತ್ತದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ: ಈ ಚಟುವಟಿಕೆಗಳು ಸಂವಿಧಾನದ ಕಲಂ 19 ಮತ್ತು 21ರ ಅಡಿಯಲ್ಲಿ ಖಾತರಿಯಾದ ಮುಕ್ತ ಸಂಚಾರ ಮತ್ತು ಭದ್ರತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ.

ವಿಶೇಷ ಅನುಮತಿ ಬೇಡ: ಸರ್ಕಾರದ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್‌ಗೆ ವಿಶೇಷ ಅನುಮತಿ ನೀಡಬಾರದು.

ಆಡಳಿತದ ನಂಬಿಕೆಗೆ ಧಕ್ಕೆ: ಇತರ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಆಡಳಿತದ ಮೇಲಿನ ನಂಬಿಕೆಗೆ ಧಕ್ಕೆ ತರಬಹುದು.

ಸೂಚನೆ ನೀಡುವಂತೆ ಆಗ್ರಹ: ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅನುಮತಿಯಿಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಅಥವಾ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸಲು ಅವಕಾಶ ನೀಡದಂತೆ ಆದೇಶಿಸಬೇಕು.

ಎಸ್.ಒ.ಪಿ. ರೂಪಿಸಲು ಕರೆ: ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಾವಳಿಗಳ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸುವುದನ್ನು ತಡೆಯಲು ಸ್ಪಷ್ಟವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್  ಅನ್ನು ಸರ್ಕಾರ ರೂಪಿಸಬೇಕು.

ಯತ್ನಾಳ್ ಈ ಬೇಡಿಕೆಗಳು ರಾಜ್ಯದಲ್ಲಿ ಧರ್ಮನಿರಪೇಕ್ಷತೆ, ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿವೆ. ಸರ್ಕಾರ ಈ ಬಗ್ಗೆ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

NO COMMENTS

LEAVE A REPLY

Please enter your comment!
Please enter your name here

Exit mobile version