Home ಸುದ್ದಿ ರಾಜ್ಯ ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ; ಐ ಲವ್ RSS ಅಭಿಯಾನ ಶುರು

ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ; ಐ ಲವ್ RSS ಅಭಿಯಾನ ಶುರು

0

ರಾಜ್ಯದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ‘ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್ ಪ್ರಾಪರ್ಟೀಸ್ ಬಿಲ್ – 2025’ರ ಕರಡು ಸಿದ್ಧವಾಗಿದ್ದು, ನಿಯಮ ಮೀರಿ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಹೊಸ ವಿಧೇಯಕದಲ್ಲಿರುವ ಪ್ರಮುಖ ಅಂಶಗಳು:

ಅನುಮತಿ ಕಡ್ಡಾಯ: ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಗಳನ್ನು ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಲು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ವರಿಷ್ಠಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

ಕಠಿಣ ಶಿಕ್ಷೆಗಳು:ನಿಯಮ ಉಲ್ಲಂಘಿಸಿ ಚಟುವಟಿಕೆ ನಡೆಸಿದರೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಎರಡನೇ ಬಾರಿಗೆ ನಿಯಮ ಮೀರಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.

ಪುನರಾವೃತ್ತಿ ಉಲ್ಲಂಘನೆಗಳಾದರೆ ಪ್ರತಿದಿನ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.

ವಿರೋಧ ಪಕ್ಷಗಳ ತೀವ್ರ ಆಕ್ಷೇಪ: ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು, “ಪ್ರಿಯಾಂಕ್ ಖರ್ಗೆಯವರನ್ನು ಬಲಿಪಶು ಮಾಡಲಾಗುತ್ತಿದ್ದು, ಇದು ಸಿಎಂ ಸಿದ್ದರಾಮಯ್ಯ ನಾಟಕ. ನಾನೂ ಕೂಡ ಗಣವೇಷಧಾರಿಯಾಗಿ ತೆರಳಿದ್ದೆ, ನನ್ನನ್ನು ಕಳುಹಿಸುವ ತಾಕತ್ ಇದೆಯೇ?” ಎಂದು ಸವಾಲು ಹಾಕಿದ್ದಾರೆ.

‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನ: ಸರ್ಕಾರದ ಈ ಕ್ರಮದ ವಿರುದ್ಧ ಹಿಂದೂಪರ ಕಾರ್ಯಕರ್ತರು ಮೈಸೂರಿನ ಚೆಲುವಾಂಬ ಪಾರ್ಕ್‌ನಲ್ಲಿ ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಈ ಹೊಸ ವಿಧೇಯಕವು ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ. ಸರ್ಕಾರಿ ಆಸ್ತಿಗಳ ಬಳಕೆ ಮತ್ತು ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿಯಂತ್ರಣದ ಕುರಿತು ಈ ಕಾಯ್ದೆ ಮಹತ್ವದ ಪರಿಣಾಮ ಬೀರಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version