Home News ಲೋಕಾಯುಕ್ತ ಹೆಸರು ದುರ್ಬಳಕೆ ಆರೋಪ ಓರ್ವನ ವಿರುದ್ಧ ದೂರು ದಾಖಲು

ಲೋಕಾಯುಕ್ತ ಹೆಸರು ದುರ್ಬಳಕೆ ಆರೋಪ ಓರ್ವನ ವಿರುದ್ಧ ದೂರು ದಾಖಲು

ಹೊಸಪೇಟೆ: ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹೆಸರು ಮತ್ತು ಲೋಗೋವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಹೊಸಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಬಿ. ಹಿರೇಮಠ ವಿರುದ್ಧ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಮಾ. ೧೨ರಂದು ಕೆ.ಬಿ. ಹಿರೇಮಠ ಎಂಬುವವರು ಲೋಕಾಯುಕ್ತ ವಿಜಯನಗರ ಜಿಲ್ಲೆಯಿಂದ ಹಮ್ಮಿಕೊಳ್ಳಲಾದ ಸಾರ್ವಜನಿಕ ಅರ್ಜಿ ಅಹವಾಲು ಸ್ವೀಕಾರ ಕಾರ್ಯಕ್ರಮದ ಪ್ರಕಟಣೆಯ ಕರ ಪತ್ರವನ್ನು ಎಡಿಟ್ ಮಾಡಿ ಕಹಿ ನಮ್ಮೂರ ಸುದ್ದಿ' ಎಂಬ ಟ್ಯಾಗ್ ಲೈನ್‌ನಲ್ಲಿ ಲೋಕಾಯುಕ್ತ ಲೋಗೋ ಮತ್ತು ಕರ್ನಾಟಕ ಲೋಕಾಯುಕ್ತ ವಿಜಯನಗರ ಜಿಲ್ಲಾ ಘಟಕದ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೆನ್ನಲಾಗಿದೆ. ಲೋಕಾಯಕ್ತ ಕಚೇರಿಯಿಂದ ಸಾರ್ವಜನಿಕ ಪ್ರಕಟಣೆಗಾಗಿನಿಮ್ಮ ಹಣ ವಾಪಸ್ ಪಡೆಯಲು ಸುವರ್ಣ ಅವಕಾಶ ಪ್ರಿಯಾಂಕ ಪತ್ತಿನ ಸಹಕಾರ ಸಂಘಕ್ಕೆ ಹಣ ಕಟ್ಟಿ ಮೋಸ ಹೋದವರು ನಾಳೆ ನೀವು ದೂರು ಸಲ್ಲಿಸಿದರೆ ನಿಮ್ಮ ಹಣವನ್ನು ವಾಪಸ್ ಕೊಡಿಸುತ್ತಾರೆ. ಇದರ ಹಿಂದಿನವರ ಬಗ್ಗೆಯೂ ಮಾಹಿತಿ ತಿಳಿಸಿರಿ. ಸೂಕ್ತವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ರಸೀದಿ ತೋರಿಸಿದರೆ ನಿಮ್ಮ ಹಣ ೧೦೦ಕ್ಕೆ ೧೦೦% ಸಿಗುವುದು ಖಂಡಿತ ಎಂದು ಮುದ್ರಿಸಿ ವಿಜಯನಗರ ಮಾಧ್ಯಮ ಮತ್ತು ಕರ್ನಾಟಕ ರಾಜ್ಯ ಜಾತ್ಯತೀತ ಎಂಬ ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಹೊಸಪೇಟೆಯ ಸಹಕಾರ ಕಲ್ಯಾಣ ಮಂಟಪದಲ್ಲಿ ದೂರು ದಾಖಲಿಸಲು ಸೂಚನೆ ನೀಡಿದ್ದರು.
ಲೋಕಾಯುಕ್ತ ಸಂಸ್ಥೆಯ ಹೆಸರು ಲೋಗೋ ಯಾವುದೋ ದುರುದ್ದೇಶದಿಂದ ಬಳಸಿಕೊಂಡು ತಪ್ಪು ಸಂದೇಶ ಉಂಟು ಮಾಡಿದ್ದಲ್ಲದೆ ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡಿರುತ್ತಾರೆ. ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಲೋಕಾಯುಕ್ತ ಇನ್ಸಪೆಕ್ಟರ್ ಅಮರೇಶ್ ಹುಬ್ಬಳ್ಳಿ ದೂರು ದಾಖಲಿಸಿದ್ದರು.

Exit mobile version