ಹೊಸಪೇಟೆ: ಅಧಿಕಾರದ ಕಚ್ಚಾಟ ರಾಜ್ಯದಲ್ಲಿ ಮ್ಯೂಜಿಕಲ್ ಚೇರ್‌ನಂತೆ ಆಗಿದೆ. ಹಗ್ಗ ಜಗ್ಗಾಟ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕಾರಿನಲ್ಲಿ ಓಡಾಡ್ತಿರುವುದನ್ನು ಕಂಡು ಸಿಎಂ ಸಿದ್ದರಾಮಯ್ಯ ಡಲ್ ಆಗಿದ್ದಾರೆ. ಸಿದ್ದರಾಮಯ್ಯ ಅವರು ಹೆಸರಿಗಷ್ಟೇ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ರೈತರಿಗೆ ಪರಿಹಾರ ನೀಡಲು ಸಹ ಹಣ ಇಲ್ಲ. ಅಧಿಕಾರಿಗಳು ಸಂಬಳ ಇಲ್ಲದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ಕಬ್ಬು ಬೆಳೆ ಪರಿಹಾರಕ್ಕಾಗಿ ಮತ್ತು ಮೆಕ್ಕೆಜೋಳ ಖರೀದಿಗಾಗಿ ಆಗ್ರಹಿಸಿ 27 ಮತ್ತು 28 ಹೋರಾಟ ಮಾಡ್ತಿದ್ದೇವೆ ಎಂದರು.
ಸರ್ಕಾರದ ವಿರುದ್ಧ ಹೋರಾಟ ಮಾಡಿದ ಫಲವಾಗಿ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಹಗರಣವನ್ನು ತಾವೇ ಒಪ್ಪಿಕೊಂಡಿದ್ದಾರೆ. ಮೂಡಾ ಹಗರಣದಲ್ಲಿ ಸಿಎಂ ಸೈಟ್ ವಾಪಸ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಸತ್ತ ಹೆಣ ಇದ್ದಂತೆ. ಸಿದ್ದರಾಮಯ್ಯ ಹಿಂದೆ ಡಿಕೆಶಿ ಮುಂದೆ ಹೊತ್ತುಕೊಂಡು ಹೋಗ್ತಿದ್ದಾರೆ ಎಂದು ಲೇವಡಿ ಮಾಡಿದರು.
