ಬೆಳಗಾವಿ: ಆಶ್ರಯ ಯೋಜನೆಗಾಗಿ 2002ರಲ್ಲಿ ರಾಜ್ಯಪಾಲರ ಹೆಸರಿನಲ್ಲಿ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಖರೀದಿಸಿದ 6 ಎಕರೆ ಜಮೀನನ್ನು ಕೆಲ ಅಧಿಕಾರಿಗಳು ಕೇವಲ 37 ಗುಂಟೆ ಜಮೀನನ್ನಷ್ಟೇ ರಾಜ್ಯಪಾಲರ ಹೆಸರಿಗೆ ನೋಂದಾಯಿಸಿ, ಉಳಿದ ಜಮೀನನ್ನು ಖಾಸಗಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಈ ಜಮೀನನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಪಾಲರ ಪರವಾಗಿ ಖರೀದಿಸಲಾಗಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿ ಡಾ. ನಿತೀಶ್ ಪಾಟೀಲ, ಉಪವಿಭಾಗಾಧಿಕಾರಿ ಡಾ.ಶಶಿಧರ್ ಬಗಲಿ, ತಹಶೀಲ್ದಾರ ನಾಗರಾಳ ಸೇರಿದಂತೆ ವಿವಿಧ ಅಧಿಕಾರಿಗಳು ಸಂಚು ನಡೆಸಿ ಪೋಡಿ ಮಾಡಿ, ಕ್ಷೇತ್ರ ತಿದ್ದುಪಡಿ ಮಾಡಲಾಗಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೇ ಈ ಕ್ರಮ ಕೈಗೊಂಡಿದ್ದು ಸರ್ಕಾರಕ್ಕೆ ೧೦ ಕೋಟಿ ನಷ್ಟ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ತಾ.ಪಂ. ಅಧಿಕಾರಿಗಳು ಈ ಬಗ್ಗೆ ಎಚ್ಚರಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ, ರಾಜ್ಯಪಾಲರು ಈಗಲೇ ಸರ್ಕಾರಕ್ಕೆ ಪತ್ರ ಬರೆದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶಿಫಾರಸು ಮಾಡಿದ್ದಾರೆ.
ಈಗ ತಕ್ಷಣ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಉಚ್ಛ ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆಯನ್ನು ಭೀಮಪ್ಪ ಗಡಾದ ಅವರು ನೀಡಿದ್ದಾರೆ.