Home News ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆ ಹಸ್ತಾಂತರ

ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಕಿ ಆನೆ ಹಸ್ತಾಂತರ

ಬೆಂಗಳೂರು: ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ವಿಧ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸಿ ಮಾತನಾಡಿ ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. ೩೬೯೫ ಆನೆಗಳು ನಮ್ಮಲ್ಲಿವೆ, ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ- ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಯಿತು. ಕಳೆದ ವರ್ಷ ಆಗಸ್ಟ್ ೮ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ ೨೭ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು, ಅದರಂತೆ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ, ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ನೆರೆಯ ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರದಿಂದ ರಾಜ್ಯಕ್ಕೂ ಪರೋಕ್ಷವಾಗಿ ಲಾಭವಾಗಲಿದೆ ಎಂದರು.

Exit mobile version