Home ತಾಜಾ ಸುದ್ದಿ ಮೋಹನ ಹೆಗಡೆಯವರಿಗೆ `ಹಳ್ಳಿಕೇರಿ ಗುದ್ಲೆಪ್ಪ ಪ್ರಶಸ್ತಿ’

ಮೋಹನ ಹೆಗಡೆಯವರಿಗೆ `ಹಳ್ಳಿಕೇರಿ ಗುದ್ಲೆಪ್ಪ ಪ್ರಶಸ್ತಿ’

0

ಹುಬ್ಬಳ್ಳಿ : ಸಂಯುಕ್ತ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಸಿಇಓ ಮೋಹನ ಹೆಗಡೆ ಅವರಿಗೆ ಪ್ರಸಕ್ತ ಸಾಲಿನ `ಹಳ್ಳಿಕೇರಿ ಗುದ್ಲೆಪ್ಪ ಸೇವಾ ಗೌರವ ಪ್ರಶಸ್ತಿ’ ಲಭಿಸಿದೆ.

ಸಮಾಜಮುಖಿಯಾದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ನಾಡಿನ ಗಣ್ಯರಿಗೆ ಹಾವೇರಿ ಜಿಲ್ಲೆ ಹೊಸರಿತ್ತಿಯ `ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ’ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡುತ್ತದೆ. ಈ ಮೂಲಕ ನಾಡಿನ ಹೆಸರಾಂತ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಯೋಧ ಗುದ್ಲೆಪ್ಪ ಹಳ್ಳಿಕೇರಿಯವರಿಗೆ ಗೌರವ ಸಲ್ಲಿಸುತ್ತದೆ.

ಈ ವರ್ಷ ಪತ್ರಿಕಾ ಕ್ಷೇತ್ರದ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ದುಡಿಯುತ್ತಿರುವ ಪತ್ರಕರ್ತ ಮೋಹನ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಧರ್ಮದರ್ಶಿ ವೀರಣ್ಣ ಚಕ್ಕಿ ತಿಳಿಸಿದ್ದಾರೆ.

ಪ್ರಶಸ್ತಿಯು ಫಲಕ ಹಾಗೂ ಪ್ರಶಸ್ತಿ ಪತ್ರದ ಜೊತೆಗೆ ೨೫ ಸಾವಿರ ರೂಪಾಯಿ ನಗದು ಒಳಗೊಂಡಿದೆ. ಗುದ್ಲೆಪ್ಪ ಹಳ್ಳಿಕೇರಿ ಅವರ ಜಯಂತಿಯ ದಿನವಾದ ಜೂನ್ ೬ರಂದು ಹೊಸರಿತ್ತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.

ಕೆಎಲ್‌ಇ ಧ್ವನಿ ನಿರ್ದೇಶಕ ಗೋಪಾಕೃಷ್ಣ ಹೆಗಡೆ ಉಪಸ್ಥಿತಿಯಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಲಿಂಗರಾಜ ಅಂಗಡಿ, ರಾಜೇಂದ್ರ ಪ್ರಸಾದ ಹಳ್ಳಿಕೇರಿ, ಪ್ರೊ.ಕೆ.ಎಸ್.ಕೌಜಲಗಿ ಹಾಗೂ ವೀರಣ್ಣ ಚಕ್ಕಿ ಇದ್ದ ಸಮಿತಿ ಮೋಹನ ಹೆಗಡೆ ಅವರನ್ನು ಆಯ್ಕೆ ಮಾಡಿತು.

ಅರ್ಥಪೂರ್ಣ ಆಯ್ಕೆ:

ಮೋಹನ ಹೆಗಡೆ ಅವರು ತಮ್ಮ ಲೇಖನಿಯಿಂದ ಧನಾತ್ಮಕವಾದ ಹಲವು ವಿಧಗಳಲ್ಲಿ ಉತ್ತರ ಕರ್ನಾಟಕವನ್ನು ಪ್ರಭಾವಿಸುತ್ತಿದ್ದಾರೆ. ಈ ನೆಲದ ಅಭಿವೃದ್ಧಿಯ ಪರ್ವದಲ್ಲಿ ಅಕ್ಷರ ಮಾರ್ಗದರ್ಶನ ನೀಡುತ್ತಿರುವ ಅಪರೂಪದ ಕಾರ್ಯನಿರತರು. ಇವರಿಗೆ ಗುದ್ಲೆಪ್ಪ ಹಳ್ಳಿಕೇರಿ ಪ್ರಶಸ್ತಿ ಅರ್ಥಪೂರ್ಣವಾಗಿದೆ ಎಂದು ಚಕ್ಕಿ ಎಂದು ಹೇಳಿದ್ದಾರೆ.

೧೯೮೫ರಿಂದ ನಾಡಿನ ಹಿರಿಯಣ್ಣ ಸಂಯುಕ್ತ ಕರ್ನಾಟಕದ ಮೂಲಕ ಮಾಡುತ್ತಿರುವ ಅಕ್ಷರ ಕಾಯಕ ಮಾದರಿಯದ್ದಾಗಿದೆ. ಪತ್ರಕರ್ತರಾಗಿ ಅವರು ಲೇಖನಿಯ ಮೂಲಕ ಮಾಡಿದ ಕೆಲಸಗಳು ಅನನ್ಯ. ಮೋಹನ ಹೆಗಡೆ ಅವರ ಹಿಂದಿನ ಬರಹಗಳಲ್ಲದೇ, ಪ್ರಸಕ್ತ ಪ್ರಕಟವಾಗುತ್ತಿರುವ ಜನಾಶಯ’ ಅಂಕಣದ ಲೇಖನಗಳು ಹರಿತ, ಅಷ್ಟೇ ಸಮಾಜ ಮುಖಿ ಮತ್ತು ಮಾನವೀಯತೆಯನ್ನು ಪ್ರತಿಪಾದಿಸುತ್ತಿರುವಂಥವು ಎಂದಿದ್ದಾರೆ.

ಸಮಾಜದ ಅಂಕುಡೊಂಕುಗಳು ಸರಿಯಾಗಬೇಕು. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳು ಹಾಗೂ ಪರಿಸರದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕು ಎಂಬ ನೈತಿಕ ಪ್ರತಿಪಾದನೆ ಅವರ ಬರಹಗಳಲ್ಲಿದೆ ಎಂದು ಚಕ್ಕಿ ಅಭಿಪ್ರಾಯಪಟ್ಟಿದ್ದಾರೆ.

Exit mobile version