
ಸೋನಿಯಾ ಸಭೇಲಿ ಪ್ರಸ್ತಾಪಕ್ಕಷ್ಟೇ ಸೀಮಿತವಾದ ಸಿದ್ದು-ಡಿಕೆ ಸೀಟು ಗುದ್ದಾಟ ಆದರೆ ಅಧಿನಾಯಕಿ ತಲುಪಿದ ರಾಜ್ಯದ ಕೈ ವರದಿ | ಆದಷ್ಟು ಬೇಗ ನಿರ್ಧರಿಸಿ: ಖರ್ಗೆ
ಸಂ.ಕ. ಸಮಾಚಾರ, ನವದೆಹಲಿ: ಕರ್ನಾಟಕದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಚರ್ಚೆ ನಡೆಸದೆ ಭಾನುವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಮಂಡಳಿಯ ತಂತ್ರಗಾರಿಕೆ ಸಭೆ ಬರ್ಖಾಸ್ತುಗೊಂಡಿದೆ. ಹಾಗಾಗಿ ಕಳೆದ ಹಲವಾರು ತಿಂಗಳಿಂದ ಇನ್ನಿಲ್ಲದ ರೀತಿಯಲ್ಲಿ ಸುದ್ದಿಯಾಗಿದ್ದ ನವೆಂಬರ್ ಕ್ರಾಂತಿ ಕೊನೆಗೂ ನಡೆಯಲಿಲ್ಲ.
ಅಧಿನಾಯಕಿ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕರ್ನಾಟಕದ ವಿಷಯ ಕೇವಲ ಪ್ರಸ್ತಾಪಕ್ಕೆ ಸೀಮಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ ಅಧಿವೇಶನದಲ್ಲಿ ಕುರಿತು ಸಭೆ ನಡೆದಿದೆ. ಜೊತೆಗೆ ಸಭೆಗೆ ಮುನ್ನವೇ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಒಮ್ಮತದಿಂದ ಒಂದು ತೀರ್ಮಾನಕ್ಕೆ ಬರುವಂತೆ ಸೂಚಿಸಿದ್ದು, ಅದು ಯಶಸ್ವಿಯಾಗಿದೆ ಎಂಬ ಸಂದೇಶ ರವಾನಿಸಿದ್ದಾರೆಂದೂ ಮೂಲಗಳು ತಿಳಿಸಿವೆ. ಈ ವೇಳೆ ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಯಲಿ.
ಅಧಿವೇಶನದ ಬಳಿಕ ನೋಡೋಣ ಎಂದಿದ್ದ ಹಿನ್ನೆಲೆಯಲ್ಲಿ ಮಂಡಳಿ ಸಭೆಯಲ್ಲಿ ಕರ್ನಾಟಕದ ವಿಷಯ ಕೆಲವೇ ನಿಮಿಷ ಚರ್ಚೆ ಆಯಿತು. ರಾಜ್ಯದಲ್ಲಿ ಭಾರಿ ಗೊಂದಲ ಸೃಷ್ಟಿಸಿ ಬಣ ರಾಜಕೀಯ ಪರಾಕಾಷ್ಠೆ ತಲುಪಿದ್ದ ಹಂತದಲ್ಲಿ ಮಧ್ಯಪ್ರವೇಶಿಸಿದ್ದ ಹೈಕಮಾಂಡ್ ಸೂಚಿತ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲೇ ಸ್ಪಷ್ಟ ಸಂದೇಶ ಕೊಡಿಸಿ ತಾತ್ಕಾಲಿಕ ಕದನ ವಿರಾಮಕ್ಕೆ ಕ್ರಮ ಕೈಗೊಂಡಿತ್ತು. ಎಲ್ಲವೂ ಅಂದು ಕೊಂಡಂತೆಯೇ ಆಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕ್ಷೀಣವಾಗಿದೆ. ಬೀಸೋದೊಣ್ಣೆ ತಪ್ಪಿಸಿಕೊಂಡ ತಪ್ಪಿಸಿಕೊಂಡ ಸಿಎಂ ಸದ್ಯಕ್ಕೆ ಸೇಫ್ ಎನ್ನಲಾಗುತ್ತಿದೆ. ಹಾಗಾಗಿ ನವೆಂಬರ್ ಮಾತ್ರವಲ್ಲದೆ ಡಿಸೆಂಬರ್ ಕ್ರಾಂತಿಯೂ ಘಟಿಸುವುದು ಅನುಮಾನ.
ಬಿಕ್ಕಟ್ಟು ಬಗ್ಗೆ ಸೋನಿಯಾ ಗಮನ ಸೆಳೆದ ಖರ್ಗೆ: ಕರ್ನಾಟಕದ ನಾಯಕತ್ವ ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರ ಗಮನ ಸೆಳೆದಿದ್ದಾರೆ. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಗೊಂದಲಗಳಿಗೆ ಅಂತ್ಯ ಹಾಡುವುದು ಒಳ್ಳೆಯದು. ಏನಾದರೂ ಒಂದು ತೀರ್ಮಾನಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾಗಿ ಹೇಳಲಾಗಿದೆ.
ಶೀಘ್ರದಲ್ಲೇ ರಾಜ್ಯಕ್ಕೆ ಸುರ್ಜೇವಾಲಾ: ಸಿಎಂ, ಡಿಸಿಎಂ ಜತೆ ಚರ್ಚೆ?
ಪರಿಸ್ಥಿತಿ ತಿಳಿಯಾಗಿರುವ ಬೆನ್ನಲ್ಲೇ ಈ ವಾರ ರಾಜ್ಯಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಸಿಎಂ-ಡಿಸಿಎಂ ಮಾತ್ರವಲ್ಲದೆ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೂ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ನಡೆಯುವ ಶಾಸಕಾಂಗ ಸಭೆಗೂ ಸುರ್ಜೇವಾಲಾ ಭಾಗಿಯಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.