ಬೆಂಗಳೂರು: ಇಂದಿರಾ ಆಹಾರ ಕಿಟ್ ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ರಾಜ್ಯದ ಅತಿ ದೊಡ್ಡ ಆಹಾರ ಭದ್ರತಾ ಯೋಜನೆಗಳಲ್ಲಿ ಒಂದಾಗಲಿರುವ ಈ ಯೋಜನೆಯನ್ನು ಪಾರದರ್ಶಕವಾಗಿಯೂ, ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿಖರ ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು “ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲಾಗಿ ಸಂಪುಟ ಈಗಾಗಲೇ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ನಿರ್ಧರಿಸಿದೆ. ಪ್ರತಿಯೊಂದು ಕುಟುಂಬಕ್ಕೂ ಗುಣಮಟ್ಟದ, ಪೌಷ್ಟಿಕಾಂಶಪೂರ್ಣ ಆಹಾರ ದೊರೆಯಬೇಕು ಎಂಬುದು ಸರ್ಕಾರದ ಗುರಿಯಾಗಿದೆ,” ಎಂದು ಹೇಳಿದರು.
ಇಂದಿರಾ ಆಹಾರ ಕಿಟ್ – ಈ ಬಾರಿ ಏನು ಬದಲಾಗುತ್ತಿದೆ? : ಈ ಯೋಜನೆಯಡಿ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕಿಟ್ ವಿತರಣೆ ಆಗಲಿದೆ. 5 ಕೆ.ಜಿ ಹೆಚ್ಚುವರಿ ಅಕ್ಕಿಗೆ ಬದಲಾಗಿ ಈಗ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ವಿತರಣೆಯಾಗಲಿದೆ.
ಪ್ರತಿ ತಿಂಗಳು ಅಗತ್ಯವಿರುವ ಪ್ರಮಾಣ: ರಾಜ್ಯದಲ್ಲಿ ಪ್ರತಿ ತಿಂಗಳು ಸುಮಾರು 1,25,08,262 ಇಂದಿರಾ ಆಹಾರ ಕಿಟ್‌ಗಳು ಬೇಕಾಗಲಿವೆ. ಇದಕ್ಕಾಗಿ ರೂ. 466 ಕೋಟಿ ವೆಚ್ಚವಾಗಲಿದೆ ಎಂದು ಪ್ರಾಥಮಿಕ ಅಂದಾಜು ನೀಡಲಾಗಿದೆ. ಅದೇ ರೀತಿ ಪ್ರತಿ ತಿಂಗಳು 18,628 ಮೆಟ್ರಿಕ್ ಟನ್ ತೊಗರಿ ಬೇಳೆ, 12,419 ಮೆಟ್ರಿಕ್ ಟನ್ ಸೂರ್ಯಕಾಂತಿ ಎಣ್ಣೆ, 12,419 ಮೆಟ್ರಿಕ್ ಟನ್ ಸಕ್ಕರೆ, 12,419 ಮೆಟ್ರಿಕ್ ಟನ್ ಉಪ್ಪು ಅಗತ್ಯವಿದೆ.
ಮುಖ್ಯಮಂತ್ರಿಗಳು ತೊಗರಿ ಬೇಳೆ ಪೌಷ್ಟಿಕತೆ ಕುರಿತಂತೆ, “ಕಿಟ್‌ನಲ್ಲಿ ಪೌಷ್ಟಿಕಾಂಶ ಹೆಚ್ಚಳಕ್ಕಾಗಿ ತೊಗರಿ ಬೇಳೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀಡುವಂತೆ ಕ್ರಮ ಕೈಗೊಳ್ಳಬೇಕು,” ಎಂದು ಸೂಚಿಸಿದರು.
ಖರೀದಿ ಪಾರದರ್ಶಕತೆ – ಕಡ್ಡಾಯ: ಉಪಕರಣಗಳ ಖರೀದಿ ನಾಫೆಡ್, ಎನ್ಸಿಸಿಎಫ್ ಅಥವಾ ಇತರೆ ಮಾನ್ಯತಾ ಪಡೆದ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ನಡೆಯಬೇಕು ಎಂದು ಸಿಎಂ ಸೂಚಿಸಿದರು. ಜೊತೆಗೆ, ಕೆಟಿಪಿಪಿ ಮೂಲಕ ಪಾರದರ್ಶಕ ಖರೀದಿ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ, ತೂಕದಲ್ಲಿ ಹೆಚ್ಚು-ಕಡಿಮೆ ಆಗದಂತೆ ಕಠಿಣ ನಿಗಾ ವಹಿಸುವಂತೆ ನಿರ್ದೇಶನಗಳನ್ನು ನೀಡಿದರು.
ವಿತರಣೆಯಲ್ಲಿ ತಂತ್ರಜ್ಞಾನ ಬಳಕೆ – QR Scan ಕಡ್ಡಾಯ: ಯೋಜನೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಸೂಚಿಸಿದ ಮುಖ್ಯಮಂತ್ರಿ, “ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂಆರ್ ಸ್ಕ್ಯಾನ್ ವ್ಯವಸ್ಥೆ ಅಳವಡಿಸಬೇಕು. ಅದರ ಆಧಾರದ ಮೇಲೆ ಪಡಿತರ ಚೀಟಿ ಹೊಂದಿರುವವರಿಗೆ ಕಿಟ್ ವಿತರಣೆಯಾಗಬೇಕು,” ಎಂದು ನಿರ್ದೇಶಿಸಿದರು.
ಕಿಟ್‌ಗಳ ವಿತರಣೆಗೆ ಸ್ಪಷ್ಟ Deadline: ಸರಬರಾಜಾದ ಕಿಟ್‌ಗಳನ್ನು ನಿಗಮದ ಗೋದಾಮುಗಳ ಮೂಲಕ ಪ್ರತಿ ತಿಂಗಳು 10ನೇ ತಾರೀಕು ಒಳಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರ ಈ ಯೋಜನೆಯ ಯಶಸ್ವಿ ಜಾರಿಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದ್ದು, ಜನರಿಗೆ ಪೌಷ್ಟಿಕಾಂಶಪೂರ್ಣ ಆಹಾರವನ್ನು ಒದಗಿಸುವ ಗುರಿಯನ್ನು ಸಾಧಿಸಲು ಬದ್ಧವಾಗಿದೆ.
