Home ತಾಜಾ ಸುದ್ದಿ ಮೋದಿ ಆಡಳಿತದಲ್ಲಿ ಜನರ ವಿಕಾಸ

ಮೋದಿ ಆಡಳಿತದಲ್ಲಿ ಜನರ ವಿಕಾಸ

0

ಭಾರತ ವಿಕಸಿತವಾಗುತ್ತಿರುವುದು ಹೊರದೇಶಗಳಿಗೂ ಗೊತ್ತಾಗುತ್ತಿದೆ

ಹುಬ್ಬಳ್ಳಿ: ಕಾಂಗ್ರೆಸ್ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು. ಜನಸಾಮಾನ್ಯರ ಜೇಬು ಖಾಲಿ ಆಗಿತ್ತು. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ೨೫ ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಿಕಸಿತ ಭಾರತದಿಂದ ಜನಸಾಮಾನ್ಯರ ಜೇಬು ಖಾಲಿ ಆಗಿದೆ’ ಎಂದು ಹೇಳಿಕೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಬೊಮ್ಮಾಯಿ ತಿಗುಗೇಟು ನೀಡಿದರು.
ರಾಜ್ಯ ವಿಕಸಿತ ಆದರೆ ಅಲ್ಲಿನ ಜನರೂ ವಿಕಸಿತ ಆದಂತೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅತ್ಯಂತ ಕಡಿಮೆ ಜನರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರು. ಆದರೆ, ಈಗ ನಾಲ್ಕು ಲಕ್ಷ ಜನರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇದು ಜನರ ವಿಕಾಸ ಅಲ್ಲವೇ ಎಂದು ಪ್ರಶ್ನಿಸಿದರು.
ಭಾರತ ವಿಕಸಿತವಾಗುತ್ತಿರುವುದು ಹೊರದೇಶಗಳಿಗೂ ಗೊತ್ತಾಗುತ್ತಿದೆ. ಶೇ ೬.೫ ರಷ್ಟು ಅಭಿವೃದ್ಧಿ ವೇಗ ಪಡೆದಿದೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಯಾದರೆ ಮಾತ್ರ ಅವರಿಗೆ ದೇಶ ಅಭಿವೃದ್ಧಿ ಆದಂತೆ. ಬಡವರು, ದೀನ ದಲಿತರು, ರೈತರು ಹಾಗೂ ಬಡ ಹೆಣ್ಣು ಮಕ್ಕಳು ಎಲ್ಲ ರಂಗದಲ್ಲಿ ಮುಂದೆ ಬರುತ್ತಿದ್ದಾರೆ. ಹೀಗಾಗಿ ವಿಕಸಿತ ಭಾರತ ಕಲ್ಪನೆ ಯಶಸ್ವಿಯಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದನ್ನು ಅರಗಿಸಿಕೊಳ್ಳಲಾಗದೇ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

Exit mobile version