ಹಾವೇರಿ(ಹಿರೇಕೆರೂರ): ಊಟ ಮುಗಿಸಿ ಕಚೇರಿಗೆ ಬೈಕ್ ಮೇಲೆ ತೆರಳುತ್ತಿದ್ದ ಹೆಸ್ಕಾಂ ಸಿಬ್ಬಂದಿ ಮೇಲೆ ಬುಡ ಸಮೇತ ಮರ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಮಾಸೂರು ರಸ್ತೆಯಲ್ಲಿರುವ ಎಪಿಎಂಸಿ ಸಮೀಪ ಸೋಮವಾರ ಸಂಭವಿಸಿದೆ.
ತಾಲೂಕಿನ ಚಿನ್ನಮುಳಗುಂದ ಗ್ರಾಮದ ಮಂಜುನಾಥ ಪುಟ್ಟಲಿಂಗಣ್ಣನವರ (೩೫) ಹಾಗೂ ಯತ್ನಳ್ಳಿ ಗ್ರಾಮದ ಹನುಮಂತಪ್ಪ ನಾಮದೇವ (೨೫) ಮೃತಪಟ್ಟಿದ್ದಾರೆ. ಇವರಿಬ್ಬರೂ ಹೆಸ್ಕಾಂನಲ್ಲಿ ಜಂಗಲ್ ಕಟಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಇಬ್ಬರೂ ಊಟ ಮುಗಿಸಿ ಹೆಸ್ಕಾಂ ಕಚೇರಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ರಸ್ತೆ ಪಕ್ಕದಲ್ಲಿದ್ದ ಬೇವಿನಮರದ ಬುಡವೇ ಕಿತ್ತು ಇವರ ಮೇಲೆ ಬಿದ್ದಿದೆ. ಮರದ ಮಧ್ಯೆ ಸಿಲುಕಿ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.