ಹಾವೇರಿ: ಪಕ್ಷಕ್ಕಾಗಿ ದುಡಿದ ಎಲ್ಲರಿಗೂ ಅಧಿಕಾರ ಸಿಗಲ್ಲ. ಹಲವು ಜನರ ಪ್ರಯತ್ನದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರ ಕೆಲವರಿಗೆ ಸಿಗುತ್ತದೆ, ಕೆಲವರಿಗೆ ಸಿಗಲ್ಲ.. ಕಾಯಬೇಕಷ್ಟೆ. ಆದಷ್ಟು ಬೇಗ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಇತ್ಯರ್ಥ ಆಗಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಕೊಟ್ಟ ಮಾತಿನ ಬಗ್ಗೆ ಬೆಂಗಳೂರು ಹಾಗೂ ದೆಹಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಕೂಡ ಆದಷ್ಟು ಬೇಗ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವಂತೆ ಕೋರಿದ್ದೇವೆ. ಪಕ್ಷಕ್ಕಾಗಿ ದುಡಿದಿರುವ ಡಿ.ಕೆ. ಶಿವಕುಮಾರ ಅವರು ಕೂಲಿ ಕೇಳುವ ಸಂದರ್ಭ ಬಂದಾಗ ಚರ್ಚೆ ಮಾಡೋಣ ಎಂದರು.
ಸತೀಶ್ ಜಾರಕಿಹೊಳಿ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷದ ವೇದಿಕೆಯಲ್ಲಿ ಎಲ್ಲವನ್ನೂ ಹೇಳ್ತಿವಿ, ಈಗ ಆ ಚರ್ಚೆ ಸದ್ಯಕ್ಕೆ ಬರಲ್ಲ. ಸಿಎಂ ಆಗಬೇಕು ಅನ್ನೋದು ಈಗ ಚರ್ಚೆ ಇಲ್ಲ. ಮುಂದೆ ಚುನಾವಣೆ ಆಗಲಿ ಆಗ ಚರ್ಚೆ ಮಾಡೋಣ. 2028ಕ್ಕೆ ನಮ್ಮದು, ಈಗ ನಮ್ಮದೇನಿಲ್ಲ ಎಂದರು.
ಸಮುದಾಯದ ಪರವಾಗಿ ಸ್ವಾಮೀಜಿ ಮಾತನಾಡೋದು ಹೊಸದಲ್ಲ. ಈ ಹಿಂದೆ ಕೂಡ ಸ್ವಾಮೀಜಿ ಆ ಸಮುದಾಯದ ಪರವಾಗಿ ಹೇಳಿದ್ದಾರೆ ಎಂದರು.