Home ತಾಜಾ ಸುದ್ದಿ ಭಾರತ ತಂತ್ರಜ್ಞಾನದಲ್ಲಿ ಮುಂಚೂಣಿ ರಾಷ್ಟ್ರ

ಭಾರತ ತಂತ್ರಜ್ಞಾನದಲ್ಲಿ ಮುಂಚೂಣಿ ರಾಷ್ಟ್ರ

0

ಬೆಳಗಾವಿ: ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದು ದೇಶದ ಅಭಿವೃದ್ಧಿಗೆ ಪೂರಕವಾಗಿ ಪದವಿ ನಂತರ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕು. ಬರುವಂತಹ ದಿನಗಳಲ್ಲಿ ಭಾರತ ವಿಶ್ವಗುರು ಸ್ಥಾನ ಅಲಂಕರಿಸಲಿದೆ ಎಂದು ವಿಶ್ವವಿದ್ಯಾಲಯ ಕುಲಾಧಿಪತಿಗಳು ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ೧೩ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಣೆ ಜೊತೆಗೆ ಮಾನವೀಯ ಮೌಲ್ಯ ಗಮನದಲ್ಲಿಟ್ಟುಕೊಂಡು ವೃತ್ತಿ ಜೀವನದಲ್ಲಿ ಮುಂದಾಗಬೇಕು. ಸರ್ವಪಲ್ಲಿ ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದರ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಮಾತಿನಂತೆ ಎಲ್ಲರೂ ಭವಿಷ್ಯದಲ್ಲಿ ಉನ್ನತ ವ್ಯಕ್ತಿಗಳಾಗಿ ಬೆಳೆಯಬೇಕು.
ಯುವ ಶಕ್ತಿ ರಾಷ್ಟ್ರದ ಅಭಿವೃದ್ಧಿಗೆ ಆಧಾರ ಸ್ಥಂಭವಿದ್ದಂತೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅನೇಕ ದಾರಿಗಳಿವೆ. ವಿದ್ಯೆ ನೀಡಿದ ಶಿಕ್ಷಕರನ್ನು ಹಾಗೂ ಹೆತ್ತ ತಂದೆ ತಾಯಿಯನ್ನು ಯಾವತ್ತೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಗೌರವ ಡಾಕ್ಟರೇಟ್ ಪ್ರಶಸ್ತಿ:
ಘಟಿಕೋತ್ಸವದಲ್ಲಿ ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ನಿಡಸೋಸಿ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್, ಸಂವಿಧಾನ ಜಾಗೃತಿಯಲ್ಲಿ ಕಾರ್ಯತತ್ಪರರಾದ ಮುಖ್ಯ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರಿಗೆ ಡಾಕ್ಟರ ಆಫ್ ಲಾ ಗೌರವ, ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಸೇವೆಗಾಗಿ ವಿಜಯಪುರದ ಸೀಕ್ಯಾಬ್ ಸಂಸ್ಥಾಪಕರು ಹಾಗೂ ಅಧ್ಯಕ್ಷ ಶಮಸುದ್ದೀನ್ ಅಬ್ದುಲ್ಲಾ ಪುಣೇಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಟ್ಟು ೪೬೦೧೩ ವಿಧ್ಯಾರ್ಥಿಗಳು ಸ್ನಾತಕ ಪದವಿ ಹಾಗೂ ೨೮೬೬ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಳ್ಳಲು ಅರ್ಹರಾಗಿದ್ದು, ೧೧ ಸುವರ್ಣ ಪದಕ ಹಾಗೂ ಒಂದು ನಗದು ಬಹುಮಾನವನ್ನು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾಯಿತು. ೨೦ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

Exit mobile version