ಚಿಕ್ಕೋಡಿ: ವಿಶ್ವದಲ್ಲಿ ಭಾರತ ಐದನೇ ಆರ್ಥಿಕ ಶಕ್ತಿ ವಲಯವಾಗಿ ಬೆಳೆದು ನಿಂತಿದೆ. ಔದ್ಯಮಿಕ, ಆರೋಗ, ಶೈಕ್ಷಣಿಕವಾಗಿ ಡಿಜಿಟಲ್ ಭಾರತ ಪ್ರಕಾಶಿಸುತ್ತಿದೆ. ಇದೆಲ್ಲವೂ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಪದ್ಮಶ್ರೀ ಡಾ. ಎಸ್. ಜೈಶಂಕರ ಹೇಳಿದರು.
ಚಿಕ್ಕೋಡಿಯಲ್ಲಿ ಬುಧವಾರ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದ ಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನ ಹೊಂದಿತ್ತು. ಇಂದು ಆತ್ಮ ನಿರ್ಭರ ಯೋಜನೆಗಳಿಂದ ಐದನೇ ಸ್ಥಾನ ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶ ನೀಡಿದೆ ಎಂದರು.
ಮೋದಿಜಿಯವರು ಕಳೆದ ದಶಕದಿಂದ ದೇಶಕ್ಕೆ ಅದ್ಭುತ ಯೋಜನೆ ತರುವುದರ ಮೂಲಕ ಭಾರತ ಪ್ರಕಾಶಿಸುವಂತೆ ಮಾಡಿದ್ದಾರೆ. ಅನ್ನ, ಉಜ್ವಲಾ, ಆವಾಸ ಯೋಜನೆಗಳಂತಹ ಅಸಂಖ್ಯ ಜನಸಾಮಾನ್ಯರನ್ನೇ ಕೇಂದ್ರವಾಗಿಟ್ಟುಕೊಂಡು ಜಾರಿಗೆ ತಂದ ಯೋಜನೆಗಳು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ ಎಂದು ಸಮರ್ಥಿಸಿದರು.