ಹುಬ್ಬಳ್ಳಿ: ದೇಶ, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಯಾರೇ ಬಂದು ಬೆಂಬಲ ಸೂಚಿಸಿದರೂ ಬ್ರಿಗೇಡ್ ಅವರನ್ನು ಸ್ವಾಗತಿಸುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬ್ರಿಗೇಡ್ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕ್ರಾಂತಿವೀರ ಬ್ರಿಗೇಡ್‌ನ ಮುಂದಿನ ಹೋರಾಟದ ರೂಪರೇಷೆಯ ಕುರಿತು ಸಭೆಯ ಬಳಿಕ ಮಾತನಾಡಿ ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯ ಸಮಯದಲ್ಲಿ ಸಾವಿರಾರು ಮಠಾಧೀಶರನ್ನು ಒಂದೇ ವೇದಿಕೆಗೆ ಕರೆಯಿಸಿ ಅವರ ಪಾದ ಪೂಜೆ ಮಾಡಿದ್ದೇವೆ. ಸಾವಿರಾರು ಮಠಾಧೀಶರನ್ನು ಏಕಕಾಲಕ್ಕೆ ಒಂದೇ ವೇದಿಕೆಯ ಮೇಲೆ ಪಾದ ಪೂಜೆ ಮಾಡಿದ್ದು ಇತಿಹಾಸದಲ್ಲೇ ಇಲ್ಲ, ಕ್ರಾಂತಿವೀರ ಬ್ರಿಗೇಡ್ ಸಾವಿರಾರು ಮಠಾಧೀಶರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಡಿ.ಕೆ.ಶಿಗೆ ಬುದ್ದಿ ಬಂದಿದೆ: ಡಿ.ಕೆ. ಶಿವಕುಮಾರ್ ಕುಂಭಮೇಳದಲ್ಲೂ ಪಾಲ್ಗೊಂಡಿದ್ದರು. ಅವರಿಗೆ ಹಿಂದುತ್ವದ ಜಾಗೃತಿ ಉಂಟಾಗಿದೆ, ಡಿ.ಕೆ. ಶಿವಕುಮಾರ್ ಅವರಿಗೆ ಈಗಾಲಾದರೂ ಬುದ್ದಿ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಬುದ್ಧಿ ಬರಲಿ. ಡಿ.ಕೆ. ಶಿವಕುಮಾರ್ ಅವರ ಹಿಂದುತ್ವದ ನಿಲುವು ನಾಟಕವೋ, ನಿಜವೋ ದೇವರು ತೀರ್ಮಾನ ಮಾಡುತ್ತಾನೆ, ಮಹಾತ್ಮ ಗಾಂಧಿ ಸಹ ಹಿಂದುತ್ವ ಪ್ರತಿಪಾದಿಸಿದ್ದರು. ಅವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆಯಲಾಗಿದೆ, ಹಿಂದುತ್ವ ಬಿಜೆಪಿ ಸ್ವತ್ತೂ ಅಲ್ಲ. ಸರ್ವ ಜನರ ಸುಖ ಬಯಸುವುದೇ ಹಿಂದುತ್ವ ಎಂದರು.
ಹಿಂದುತ್ವ ಕೇವಲ ಬಿಜೆಪಿ ಸ್ವತ್ತಲ್ಲ: ಸ್ವಾಂತಂತ್ರ್ಯ ಪೂರ್ವದ ಕಾಂಗ್ರೆಸ್ಸಿಗರು ಹೋರಾಟ ಮಾಡಿದ್ದೇ ಹಿಂದುತ್ವವನ್ನು ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಿಂದುತ್ವ ಕೇವಲ ಬಿಜೆಪಿ ಸ್ವತ್ತಲ್ಲ. ಸರ್ವ ಜನರ ಸುಖ ಬಯಸುವುದೇ ಹಿಂದುತ್ವ. ಹಳೆ ಕಾಂಗ್ರೆಸ್ಸಿಗರ ರಕ್ತದಲ್ಲಿ ಹಿಂದುತ್ವ ಈಗಲೂ ಇದೆ. ಎಲ್ಲರೂ ಧರ್ಮದ್ರೋಹಿಗಳಲ್ಲ ಎಂದರು.