ಬೀದರ್: ಪ್ರತಾಪನಗರದಲ್ಲಿರುವ ಸರ್ಕಾರಿ ನೌಕರರ ಭವನದ ಬಳಿ ಸೋಮವಾರ ಸಂಜೆ ಸಂಭವನೀಯ ಹೊಡೆದಾಟ ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.
ಸರ್ಕಾರಿ ನೌಕರರ ಸಂಘ ಬೀದರ್ ತಾಲ್ಲೂಕು ಘಟಕದ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿತ್ತು. ಇದೆ ಸಂದರ್ಭದಲ್ಲಿ ಓರ್ವ ಸ್ಪರ್ಧಾ ಆಕಾಂಕ್ಷಿ ಸುಮಾರು ೧೦ ನಾಮಪತ್ರಗಳನ್ನು ಹಿಡಿದು ಚುನಾವಣಾಧಿಕಾರಿ ಬಳಿಗೆ ಹೋಗುತ್ತಿರುವುದನ್ನು ನೋಡಿ ಎದುರಾಳಿ ತಂಡದವರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸ್ಥಳದಲ್ಲಿಯೇ ಬಿಡಾರ್ ಹೂಡಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಎರಡು ಕಡೆಯವರನ್ನು ಚದುರಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.