ಬೀದರ: ಜಿಲ್ಲೆಯ ಔರಾದ್ ತಾಲೂಕಿನಲ್ಲಿ ನಡೆದ ಕ್ರೂರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ಮೂಲದ ಯುವಕನೊಬ್ಬನ ಮೇಲೆ ಅಕ್ರಮ ಸಂಬಂಧದ ಶಂಕೆಯಿಂದ ಸ್ಥಳೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಔರಾದ್ ತಾಲೂಕಿನ ನಾಗನಪಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗೌಣಗಾಂವ್ ಗ್ರಾಮದ ವಿಷ್ಣು (27) ಮೃತಪಟ್ಟ ಯುವಕ. ಸ್ಥಳೀಯ ಮಹಿಳೆಯೊಂದರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಆಕೆಯ ತಂದೆ ಮತ್ತು ಸಹೋದರರು ವಿಷ್ಣು ವಿರುದ್ಧ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ವಿಡಿಯೋದಲ್ಲಿ ವಿಷ್ಣು ಕೈ-ಕಾಲು ಕಟ್ಟಿ ದೊಣ್ಣೆಯಿಂದ ಹೊಡೆತಗೊಳಗಾಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಅ. 21ರಂದು ಮಹಿಳೆಯ ಮನೆಗೆ ಭೇಟಿ ನೀಡಿದ್ದ ವಿಷ್ಣು ಮೇಲೆ ಆರೋಪಿಗಳು ಹಲ್ಲೆ ನಡೆಸಿದ ಬಳಿಕ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಷ್ಣು ಸಾವನ್ನಪ್ಪಿದ್ದಾನೆ.
ಘಟನೆಯ ನಂತರ ಮೃತ ವಿಷ್ಣು ತಾಯಿ ಲಕ್ಷ್ಮಿ, ತನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಥಳಿಸಿರುವುದಾಗಿ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ನಡುವೆ, ಹಲ್ಲೆ ನಡೆಸಿದ ಆರೋಪಿಗಳಾದ ಮಹಿಳೆಯ ಕುಟುಂಬಸ್ಥರು ಪ್ರತಿದೂರು ಸಲ್ಲಿಸಿದ್ದಾರೆ.