Home ತಾಜಾ ಸುದ್ದಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಚಿವರು ನಮಗೆ ಬೇಡ

ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಚಿವರು ನಮಗೆ ಬೇಡ

0

ದಾವಣಗೆರೆ: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ನಡೆಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಕೂಡಲೇ ಬದಲಾವಣೆ ಮಾಡಿ ಬೇರೆಯವರನ್ನು ನೇಮಕ ಮಾಡಬೇಕು. ಇಂಥ ಸಚಿವರು ನಮಗೆ ಬೇಡ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದು ನಿಜ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಿದರೆ ನಾವು ಹೇಗೆ ಪಕ್ಷ ಸಂಘಟನೆ ಮಾಡುವುದು? ಇಂಥ ಸಚಿವರಿಂದ ನಾವೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ, ಮಲ್ಲಿಕಾರ್ಜುನ್ ಅವರನ್ನು ಬದಲಾಯಿಸಿ ಬೇರೆಯೊಬ್ಬರನ್ನು ನೇಮಿಸುವಂತೆ ಒತ್ತಾಯಿಸಿದ್ದಾರೆ.
ಬುಧವಾರ ಪತ್ರ ಬರೆದಿದ್ದೇನೆ. ಸಿಎಂ ಹಾಗೂ ಡಿಸಿಎಂ ಅವರ ಗಮನಕ್ಕೆ ತಂದಿದ್ದೇನೆ. ನನಗೆ ಫೋನ್ ಅಥವಾ ಭೇಟಿಯಾಗುವಂತೆ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ ಸಿಎಂ ಬಳಿಗೆ ಹೋಗಿ ಮುಕ್ತವಾಗಿ ಮಾತನಾಡುತ್ತೇನೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಈ ವಿಚಾರ ಸಂಬಂಧ ಮಾತನಾಡಿದ್ದೇನೆ, ಗಮನಕ್ಕೂ ತಂದಿದ್ದೇನೆ. ಆದ್ರೂ ಕ್ಯಾರೆ ಎನ್ನುತ್ತಿಲ್ಲ. ಇಂಥ ಸಚಿವರಿದ್ದರೆ ಶಾಸಕರು ಹೇಗೆ ಕೆಲಸ ಮಾಡುವುದು ಎಂದು ಪ್ರಶ್ನಿಸಿದ್ದಾರೆ.

Exit mobile version