Home ತಾಜಾ ಸುದ್ದಿ ಪ್ರೇಮ ಪ್ರಕರಣ: ಸಹೋದರರಿಂದ ಹಿಂಸಾತ್ಮಕ ಅಂತ್ಯ

ಪ್ರೇಮ ಪ್ರಕರಣ: ಸಹೋದರರಿಂದ ಹಿಂಸಾತ್ಮಕ ಅಂತ್ಯ

0

ಬಸವಕಲ್ಯಾಣ: ಪ್ರೀತಿಸಿದ ಯುವತಿಗೆ ಬಿಟ್ಟು ಬಿಡುವಂತೆ ಸಾಕಷ್ಟು ಬಾರಿಗೆ ಎಚ್ಚರಿಕೆ ನೀಡಿದರು ಸಹ ಇದಕ್ಕೆ ಒಪ್ಪದ ಯುವಕನಿಗೆ ಯುವತಿ ಸಹೋದರರು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ‌ ನಿರಗೂಡಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಜರುಗಿದೆ‌.

ನಿರಗೂಡಿ ಗ್ರಾಮದ ನಿವಾಸಿ ಪ್ರಶಾಂತ ಭರತ ಬಿರಾದಾರ (25) ಕೊಲೆಯಾದ ಯುವಕ ನಾಗಿದ್ದು, ಯಲ್ಲಾಲಿಂಗ ಬಸವರಾಜ ಮೇತ್ರೆ ಹಾಗೂ ಈತನ ಸಹೋದರ ಪ್ರಶಾಂತ ಮೇತ್ರೆ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.

ಕೊಲೆಯಾದ ಯುವಕ ಪ್ರಶಾಂತ ಬಿರಾದಾರ ಕಳೆದ ಕೆಲ ವರ್ಷಗಳಿಂದ ತಮ್ಮ ಪಕ್ಕದ ಮನೆಯ ಯುವತಿಗೆ ಪ್ರೀತಿಸುತಿದ್ದ, ಇದರಿಂದ ಕೋಪಗೊಂಡ ಯುವತಿ ಸಹೋದರರು, ತಮ್ಮ‌ ಸಹೋದರಿಯೊಂದಿಗಿನ ಸಂಬಂಧ ಬಿಟ್ಟು ಬಿಡುವಂತೆ ಈ ಹಿಂದೆ ಹಲವು ಬಾರಿ ವಾರ್ನ್ ಮಾಡಿದ್ದರು ಎನ್ನಲಾಗಿದೆ. ಈ ನಡುವೆ ಕೆಲ ತಿಂಗಳಿಂದ ಮಹಾರಾಷ್ಟ್ರದ ಪೂನಾಗೆ ತೆಳಿದ ಯುವಕ ಅಲ್ಲೆ ಗೂಡ್ಸ್ ವಾಹನದ ಚಾಲಕನಾಗಿ ಕೆಲಸ ಮಾಡುತಿದ್ದ, ಕಳೆದ 26 ರಂದು ಜರುಗಿದ ತನ್ನ ಸಹೋದರಿ ಮದುವೆ ನಿಮಿತ್ತ ಯುವಕ ಗ್ರಾಮಕ್ಕೆ ಬಂದಿದ್ದು, ಪ್ರೀತಿಸಿದ ಯುವತಿಯೊಂದಿಗೆ ಸಂಪರ್ಕ ಮುಂದುವರೆಸಿದ್ದ ಎನ್ನಲಾಗಿದೆ.

ಯುವತಿಗೆ ಬಿಟ್ಟು ಬಿಡುವಂತೆ ಸಾಕಷ್ಟು ಬಾರಿ ಬುದ್ಧಿ ಹೇಳಿದರು ಕೇಳದ ಯುವಕ ಪ್ರಶಾಂತನಿಗೆ ಮುಗಿಸಿಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದ ಯುವತಿ ಸಹೋದರರಾದ ಯಲ್ಲಾಲಿಂಗ ಹಾಗೂ ಪ್ರಶಾಂತ ಎನ್ನುವ ಇಬ್ಬರು ಯುವಕರು, ಶುಕ್ರವಾರ ರಾತ್ರಿ ಗ್ರಾಮದ ವಾಲ್ಮೀಕಿ ವೃತ್ತದ ಬಳಿ ಯುವಕನೊಂದಿಗೆ ಜಗಳ ತಗೆದಿದ್ದು, ಈ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ, ಪಿಎಸ್ಐ ನಾಗೇಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದೆ‌.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version