Home ನಮ್ಮ ಜಿಲ್ಲೆ ಕೊಪ್ಪಳ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ, ಮತ್ತೊಬ್ಬನಿಗೆ ಹುಡುಕಾಟ

ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ, ಮತ್ತೊಬ್ಬನಿಗೆ ಹುಡುಕಾಟ

0

ಕೊಪ್ಪಳ: ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ಗುರುವಾರ ರಾತ್ರಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ನಾಪತ್ತೆಯಾಗಿದ್ದ ಪ್ರವಾಸಿಯ ಶವ ಇಂದು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಪತ್ತೆಯಾಗಿದೆ. ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ.
ಈ ಮಧ್ಯೆ, ಇಬ್ಬರು ಮಹಿಳಾ ಸಂತ್ರಸ್ತರ ಮೇಲೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಸಂತ್ರಸ್ಥ ಮಹಿಳೆಯರ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಹಲ್ಲೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಪೊಲೀಸರು ಗಂಗಾವತಿ ನಿವಾಸಿಗಳಾದ ಮಲ್ಲೇಶ್ ಅಲಿಯಾಸ್ ಹಂಡಿಮಲ್ಲ (22) ಮತ್ತು ಚೇತನ್ ಸಾಯಿ (21) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗಲಾಟೆಯಲ್ಲಿ ಗಾಯಗೊಂಡಿರುವ ಮಹಾರಾಷ್ಟ್ರದ ನಾಸಿಕ್‌ ಪಂಕಜ್‌ ಅವರ ಸಹೋದರ ಇಲ್ಲಿಗೆ ಬಂದಿದ್ದಾರೆ. ಮೃತಪಟ್ಟ ಬಿಬಾಶ್ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಇಸ್ರೇಲ್ ಮತ್ತು ಸ್ಥಳೀಯ ಮಹಿಳೆಯರ ವೈದ್ಯಕೀಯ ಪರೀಕ್ಷೆ ಮಾಡಿದ್ದು ವರದಿ ಬರಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Exit mobile version