Home ಅಪರಾಧ ನೌಕಾನೆಲೆ ಮಾಹಿತಿ ಸೋರಿಕೆ: ಇಬ್ಬರನ್ನು ಮತ್ತೆ ಬಂಧಿಸಿದ NIA

ನೌಕಾನೆಲೆ ಮಾಹಿತಿ ಸೋರಿಕೆ: ಇಬ್ಬರನ್ನು ಮತ್ತೆ ಬಂಧಿಸಿದ NIA

0

ಕಾರವಾರ: ಐಎನ್ಎಸ್ ನೌಕಾನೆಲೆಯ ಮಾಹಿತಿ ಸೋರಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಆರು ತಿಂಗಳ ಬಳಿಕ ಮತ್ತೆ ಕಾರವಾರಕ್ಕೆ ಆಗಮಿಸಿದ್ದು, ಮಂಗಳವಾರ ಮುಂಜಾನೆ ಈ ಹಿಂದೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ.
ಕಾರವಾರ ತಾಲೂಕಿನ ಮುದಗಾದ ವೇತನ್ ತಾಂಡೇಲ್ ಹಾಗೂ ಅಂಕೋಲಾದ ಅಕ್ಷಯ್ ಎಂಬುವವರನ್ನು ಎನ್ ಐಎ ಅಧಿಕಾರಿಗಳು ಆರು ತಿಂಗಳ ಬಳಿಕ ಮತ್ತೆ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ವೇತನ್ ತಾಂಡೇಲ್ ಎಂಬಾತನನ್ನು ಕಾರವಾರ ನಗರ ಠಾಣೆಯಲ್ಲಿ ಹಾಗೂ ಅಂಕೋಲಾದ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ನಾಯ್ಕ್ ನನ್ನು ಇರಿಸಲಾಗಿದ್ದು ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.‌
ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ನಗರಠಾಣೆಗೆ ಆಗಮಿಸಿದ ಮೂವರು ಡಿವೈಎಸ್‌ಪಿ ನೇತೃತ್ವದ ಆರು ಅಧಿಕಾರಿಗಳ ತಂಡ ರಾತ್ರಿಯವರೆಗೂ ನಗರಠಾಣೆಯಲ್ಲೇ ಬೀಡುಬಿಟ್ಟು ಪ್ರಕರಣದ ಸಂಬಂಧ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿತ್ತು. ಅಲ್ಲದೆ ಪಂಚರನ್ನಾಗಿ ಸಹ ಸ್ಥಳೀಯ ನಗರಸಭೆ ನೌಕರರನ್ನು ಮತ್ತು ದಾಳಿಗಾಗಿ ಪೊಲೀಸರನ್ನು ಜೊತೆಯಲ್ಲಿ ಇಟ್ಟುಕ್ಕೊಂಡಿದ್ದ ಎನ್ ಐಎ ಅಧಿಕಾರಿಗಳು ಮಂಗಳವಾರ ಮುಂಜಾನೆ 5 ಗಂಟೆಗೆ ಇಬ್ಬರ ಮನೆ ಮೇಲೂ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅರಗಾದ ಸೀಬರ್ಡ್ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ ೨೦೨೪ರಲ್ಲಿ ಅಗಷ್ಟ್ ತಿಂಗಳಲ್ಲಿ ಕಾರವಾರಕ್ಕೆ ಆಗಮಿಸಿದ್ದ ಎನ್‌ಐಎ ತಂಡ ಸ್ಥಳೀಯ ಮೂವರನ್ನು ವಿಚಾರಣೆ ನಡೆಸಿ ಬಿಡಲಾಗಿತ್ತು. ಈ ಶಂಕಿತ ಆರೋಪಿಗಳನ್ನು ಪಾಕಿಸ್ತಾನಿ ಏಜೆಂಟ್ ಹನಿಟ್ರ್ಯಾಪ್ ಮಾಡಿ ನೌಕಾನೆಲೆಯ ಮಾಹಿತಿ ಕಲೆ ಹಾಕಿದ್ದಳು. ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಈಕೆ ಶಂಕಿತ ಆರೋಪಿಗಳಾದ ಸ್ಥಳೀಯ ಮೂವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಳು. ಹೀಗೆ ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪಾಕಿಸ್ತಾನಿ ಏಜೆಂಟ್ ಮಹಿಳೆ ೨೦೨೩ರಲ್ಲಿ ಫ್ರೆಂಡ್ ರಿಕ್ವೆಸ್ಟ್ ನೀಡಿದ್ದಳು. ಈ ವೇಳೆಗಾಗಲೇ ಈ ಯುವಕರಿಂದ ಸೀಬರ್ಡ್ ಪ್ರದೇಶದಲ್ಲಿ ನಡೆಯುತ್ತಿರುವ ಕೆಲಸ, ಯುದ್ಧನೌಕೆಗಳ ಮಾಹಿತಿ, ಆಗಮನ ಹಾಗೂ ಹೊರಡುವ ಸಮಯ, ಭದ್ರತೆಯ ಮಾಹಿತಿ ಈ ಏಜೆಂಟ್ ಪಡೆದಿದ್ದಳು. ಈ ಮಾಹಿತಿ ನೀಡಿದ್ದಕ್ಕೆ ಈ ಏಜೆಂಟ್ ೮ ತಿಂಗಳ ಕಾಲ ತಲಾ ೫ ಸಾವಿರ ರು. ಹಣವನ್ನು ನೀಡಿದ್ದ ಬಗ್ಗೆ ಎನ್‌ಐಎ ತನಿಖೆ ವೇಳೆ ಬಹಿರಂಗಗೊಂಡಿತ್ತು.
೨೦೨೩ರಲ್ಲಿ ವಿಶಾಖಪಟ್ಟಣಂನಲ್ಲಿ ಹೈದಾರಾಬಾದ್ ಎನ್‌ಐಎ ತಂಡದಿಂದ ದೀಪಕ್ ಹಾಗೂ ತಂಡ ಬಂಧಿಸಲ್ಪಟ್ಟಾಗ ಈ ಮಾಹಿತಿ ಬಯಲಾಗಿತ್ತು. ರಾಷ್ಟ್ರವಿರೋಧಿ ಚಟುವಟಿಕೆಯಡಿ ಎನ್‌ಐಎ ದೀಪಕ್ ಖಾತೆಗೆ ಯಾವ ಖಾತೆಯಿಂದ ಹಣ ಬೀಳುತ್ತಿತ್ತೋ ಅದೇ ಖಾತೆಯಿಂದ ಕಾರವಾರ ತಾಲೂಕಿನ ತೋಡೂರು ಗ್ರಾಮದ ಸುನೀಲ್ ನಾಯ್ಕ್, ಮುದಗಾದ ಗ್ರಾಮದ ವೇತನ್ ತಾಂಡೇಲ್ ಮತ್ತು ಅಂಕೊಲಾದ ಅಕ್ಷಯ್ ರವಿ ನಾಯ್ಕ್ ಖಾತೆಗೂ ಹಣ ಬೀಳುತ್ತಿತ್ತು. ದೀಪಕ್ ಹಾಗೂ ತಂಡ ಬಂಧನಕ್ಕೊಳಗಾದಾಗ ಈ ಇಬ್ಬರಿಗೂ ಹಣ ಬರೋದು ನಿಂತು ಹೋಗಿತ್ತು. ಈ ಮಾಹಿತಿ ಆಧರಿಸಿ ೨೦೨೪ರ ಆಗಸ್ಟ್ ಕಾರವಾರಕ್ಕೆ ಆಗಮಿಸಿದ್ದ ಹೈದರಾಬಾದ್ ಹಾಗೂ ಬೆಂಗಳೂರು ಎನ್‌ಐಎ ತಂಡ ಮೂವರನ್ನು ವಶಕ್ಕೆ ಪಡೆದಿತ್ತು.
ಆ ವೇಳೆಯಲ್ಲಿ ಹೈದ್ರಾಬಾದ್ ಹಾಗೂ ಬೆಂಗಳೂರಿನ ಎನ್‌ಐಎ ಡಿವೈಎಸ್‌ಪಿ ಹಾಗೂ ೩ ಇನ್ಸ್ಪೆಕ್ಟರ್‌ಗಳಿಂದ ಶಂಕಿತ ಆರೋಪಿಗಳ ತನಿಖೆಯಾಗಿತ್ತು. ಸೀಬರ್ಡ್ ನೌಕಾನೆಲೆ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಇನ್ನಷ್ಟು ಶಂಕಿತರಿದ್ದಾರೆ ಎಂದು ಎನ್‌ಐಎ ಅಂದೇ ಮೂಲಗಳಿಂದ ಮಾಹಿತಿ ಪಡೆದಿತ್ತು. ಕೆಲವು ಶಂಕಿತರ ಮೇಲೆ ಎನ್‌ಐಎ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಣ್ಣಿಟ್ಟಿತ್ತು ಅದರಂತೆ ಇದೀಗ ಬೆಂಗಳೂರು ಮತ್ತು ಹೈದ್ರಾಬಾದ್ ಎನ್‌ಐಎ ತಂಡ ಮತ್ತೆ ನಗರದಲ್ಲಿ ಬೀಡು ಬಿಟ್ಟು ಇಬ್ಬರನ್ನು ವಶಕ್ಕೆ ಪಡೆದಿದೆ.

Exit mobile version