Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ: ವೆಸ್ಕೊ ಹೆಸರಿನಲ್ಲಿ ಅತಿಕ್ರಮಣ ಆರೋಪ — ಜಿಲ್ಲಾಧಿಕಾರಿಗಳಿಗೆ ಮನವಿ

ದಾಂಡೇಲಿ: ವೆಸ್ಕೊ ಹೆಸರಿನಲ್ಲಿ ಅತಿಕ್ರಮಣ ಆರೋಪ — ಜಿಲ್ಲಾಧಿಕಾರಿಗಳಿಗೆ ಮನವಿ

0

ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರಸಭೆಯ ವ್ಯಾಪ್ತಿಯಲ್ಲಿರುವ ಸರ್ಕಾರದ ಅಮೂಲ್ಯ ಜಮೀನನ್ನು ಖಾಸಗಿ ಸಂಸ್ಥೆಯಾದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ (ವೆಸ್ಕೊ) ಹೆಸರಿನಲ್ಲಿ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಸೇವೆಯ ಹೆಸರಿನಲ್ಲಿ ವೆಸ್ಕೊ ಸಂಸ್ಥೆಯವರು ಅಂಗನವಾಡಿ ಹಾಗೂ ಇತರ ಕಟ್ಟಡಗಳು ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಹೊರಬಿದ್ದಿದೆ. ಈ ಕುರಿತು ಕರ್ನಾಟಕ ಜೈ ಭೀಮ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜಯ ಟಿ. ಕಾಂಬಳೆ ಹಾಗೂ ಮಾಜಿ ದಾಂಡೇಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಗಗ್ಗರಿ ಅವರು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರನ್ನು ಭೇಟಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಮಾನುಸಾರ, ಯಾವುದೇ ಸ್ಥಳೀಯ ಸಂಸ್ಥೆಗೆ ಸೇರಿದ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ನೀಡುವಲ್ಲಿ ಮಾರ್ಗಸೂಚಿ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಮೊದಲು ಖಾಸಗಿ ಸಂಸ್ಥೆಗೆ ಜಮೀನು ಹಂಚಿಕೆ ಮಾಡಲು ನಗರಾಡಳಿತ ಸರ್ಕಾರದ ಅನುಮೋದನೆ ಪಡೆದು, ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯನೆ ನಡೆಸಬೇಕಾಗುತ್ತದೆ. ನಂತರ ಪಡೆದ ಉದ್ದೇಶಕ್ಕೆ ಮಾತ್ರ ಜಮೀನು ಬಳಸಬೇಕೆಂಬ ನಿಯಮವಿದೆ.

ಆದರೆ, ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಹಾಗೂ ನಗರಸಭೆಯ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು, ಯಾವುದೇ ಕಾನೂನು ಕ್ರಮವಿಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನನ್ನು ವೆಸ್ಕೊ ಸಂಸ್ಥೆಗೆ ಬಳಸಲು ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ.

ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು, ಈ ಕುರಿತ ಮನವಿಯನ್ನು ಸ್ವೀಕರಿಸಿ ವಿಷಯದ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version