ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಡುಗಳಲ್ಲಿ ಅಪರೂಪಕ್ಕೆ ಕಾಣಸಿಗುವ ಕತ್ತೆಕಿರುಬದ ದರ್ಶನವಾಗಿದೆ. ಕೆಲವೇ ದಿನಗಳ ಹಿಂದೆ ಕುಳಗಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದ್ದು ಸುದ್ಧಿಯಾಗಿತ್ತು.
ಆದರೆ ಈ ಹಿಂದೆ ದಾಂಡೇಲಿಯ ಕಾಡುಗಳಲ್ಲಿ ಕತ್ತೆಕಿರುಬವನ್ನು ಯಾರು ನೋಡಿದ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಗೆ ಕತ್ತೆಕಿರುಬ ಹೇಗೆ ಬಂತು ಎನ್ನುವದು ಯಕ್ಷಪ್ರಶ್ನೆಯಾಗಿದೆ. ಇದೀಗ ಬುಧವಾರ ಬೆಳಗಿನ ಜಾವ ಗಣೇಶ ಗುಡಿಯ ಸೇತುವೆ ಬಳಿ ಕತ್ತೆಕಿರುಬವೊಂದು ಕಾಣಿಸಿಕೊಂಡಿದ್ದು, ಸದ್ಯ ಮೊಬೈಲ್ ನಲ್ಲಿ ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ.
ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಒಂದೆಡೆ ಹುಲಿ, ಚಿರತೆಗಳ ದರ್ಶನವಾದರೆ ಇನ್ನೊಂದಡೆ ಕತ್ತೆಕಿರುಬ ಕಾಣಿಸಿಕೊಂಡಿದೆ. ಕೊಳೆತ ಪ್ರಾಣಿ ತಿಂದು ಕಾಡು ಸ್ವಚ್ಛ ಮಾಡುವ ಈ ಪ್ರಾಣಿ ಮನುಷ್ಯನಿಗೆ ತೀರಾ ಅಪಾಯಕಾರಿಯಲ್ಲ. ಆದರೆ ಜಾಗೃತೆ ಯಿಂದಿರುವದು ಒಳಿತು. ಬರಲಿರುವ ದಿನಗಳಲ್ಲಿ ಪ್ರವಾಸಿ ಪ್ರಾಣಿಪ್ರಿಯರಿಗೆ ಅಪರೂಪದ ಕತ್ತೆಕಿರುಬಗಳ ದರ್ಶನವಾಗಲೂ ಬಹುದು.
