Home ವೈವಿಧ್ಯ ಸಂಪದ ಜೀವನಕ್ಕೆ ಸಾರ್ಥಕ ಪೂರ್ಣತೆ

ಜೀವನಕ್ಕೆ ಸಾರ್ಥಕ ಪೂರ್ಣತೆ

0

ರಾಮಾಯಣದಲ್ಲಿ ಬರುವ ಪ್ರಸಿದ್ಧ ಸುಭಾಷಿತ: ಸರ್ವೇ ಕ್ಷಯಾಂತಾಃ ನಿಚಯಾಃ ಪತನಾಂತಾಃ ಸಮುಚ್ಛಯಾಃ ಚ ಸಂಯೋಗಾ ವಿಪ್ರಯೋಗಾಂತಾಃ ಮರಣಾತಂ ಚ ಜೀವಿತಮ್' ಈ ಸೃಷ್ಟಿಯಲ್ಲಿ ಈ ನಾಲ್ಕಕ್ಕೆ ಕೊನೆ ಇರಲೇಬೇಕಾಗುತ್ತದೆ: ಸಂಪತ್ತುಗಳು, ಎತ್ತರ, ಸಂಯೋಗ ಮತ್ತು ಜೀವನ. ಇದನ್ನು ಅರ್ಥಮಾಡಿಕೊಂಡು ದುಃಖ ಪಡದೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಭಗವಂತನು ಹೇಳಿದ ಮಾತುತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮರ್ಹಸಿ’ ಹುಟ್ಟಿದ ನಂತರ ಮರಣವನ್ನು ತಪ್ಪಿಸಿಕೊಳ್ಳಲಿಕ್ಕಾಗುವುದಿಲ್ಲ. ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲದ ವಿಷಯವನ್ನು ಕುರಿತು ದುಃಖಿಸಬಾರದು, ಅದಕ್ಕೆ ಮೊದಲನಿಂದಲೇ ಸಿದ್ಧತೆಮಾಡಿಕೊಂಡು ಎದುರಿಸಬೇಕು. ಇದಕ್ಕೆ ಮೂರು ಮುಖ್ಯ ಉದಾಹರಣೆಗಳನ್ನು ಈ ಸುಭಾಷಿತವು ಕೊಡುತ್ತಿದೆ. ಮೊದಲನೆಯದಾಗಿ ಎಲ್ಲ ಸಂಪತ್ತುಗಳು ಒಂದಲ್ಲ ಒಂದು ದಿನ ಕ್ಷಯವಾಗಲೇಬೇಕಾಗುತ್ತದೆ. ಪರಿಶ್ರಮದಿಂದ ಕಟ್ಟಿ ಸಮೃದ್ಧವಾಗಿ ಬೆಳೆಸಿದ ಸಾಮ್ರಾಜ್ಯಗಳು ಶತಮಾನಗಳ ನಂತರವಾದರೂ ಪತನಗೊಳ್ಳುತ್ತವೆ. ಮುತ್ತಜ್ಜನ ಕಾಲದಿಂದ ಸರ್ಪಗಾವಲಿನಲ್ಲಿ ಹೂತಿಟ್ಟ ನಿಧಿಯೂ ಕೂಡ ಒಂದು ದಿನ ಯಾವುದಾದರೂ ರೀತಿಯಿಂದ ನಾಶ ಹೊಂದುತ್ತದೆ, ಅಥವಾ ಕೈತಪ್ಪಿ ಹೋಗುತ್ತದೆ.
ಎರಡನೆಯದಾಗಿ ಎಲ್ಲ ಎತ್ತರ ಗುಡ್ಡಗಳಿಗೂ ಒಂದು ತಗ್ಗು ಇರುತ್ತದೆ. ಪಕ್ಕದಲ್ಲಿ ತಗ್ಗು ಇಲ್ಲದ ಗುಡ್ಡ ಯಾವುದೂ ಇಲ್ಲ. ಅಥವಾ ಎತ್ತರಕ್ಕೇರಿದ ಯಾವುದೇ ವಸ್ತು ಒಮ್ಮೆ ಕೆಳಗೆ ಇಳಿಯಲೇಬೇಕಾಗುತ್ತದೆ. ಅಥವಾ ಬೀಳಲೇಬೇಕಾಗುತ್ತದೆ. ಮೂರನೆಯದಾಗಿ ಯಾವುದೇ ಸಂಯೋಗ ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಎರಡು ಕೈಗಳು ಕೂಡಿದಾಗ ಕೈ ಮುಗಿಯುವಿಕೆ ನಮಸ್ಕಾರ ಮುದ್ರೆಯಾಗುತ್ತದೆ. ಕೂಡಿದ ಕೈಗಳು ಯಾವಾಗಲೂ ಕೂಡಿಕೊಂಡೇ ಇರಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ಕೆಲಸಗಳಿಗೋಸ್ಕರ ಕೈಗಳ ಸಂಯೋಗದ ವಿಯೋಗ ಆಗಲೇಬೇಕು. ಹಾಗೆಯೇ ಜೀವನವು ಮರಣದಲ್ಲಿ ಅಂತ್ಯಕಾಣಲೇ ಬೇಕಾಗುತ್ತದೆ.
ಹಾಗಾದರೆ ಬೇಗನೆ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗೋಣವೇ? ಹಾಗಲ್ಲ. ಮರಣವನ್ನು ಜೊತೆಗಿಟ್ಟೇ ಹುಟ್ಟಿಸಿದ ಸೃಷ್ಟಿಕರ್ತನ ಅಭಿಪ್ರಾಯ ಹುಟ್ಟಿದ ಕೂಡಲೇ ಸಾಯಬೇಕೆಂಬುದು ಅಲ್ಲ. ಪಡೆದುಕೊಂಡು ಬಂದ ಕರ್ತವ್ಯಗಳನ್ನು ಚೆನ್ನಾಗಿ ಪೂರೈಸುವ ಮೂಲಕ ಧರ್ಮದ ಸಾಧನೆ ಮಾಡಿಕೊಂಡು ಮೇಲಕ್ಕೆ ಮತ್ತೆ ಮರಣವಿಲ್ಲದ ಸ್ಥಿತಿಗೆ ಹೋಗಲಿ ಎಂಬುದೇ ಅವನ ಆಶಯ. ಯಾಕೆಂದರೆ ಆತ್ಮಹತ್ಯೆ ಮಾಡಿಕೊಂಡು ಮೊದಲೇ ಸತ್ತು ಹೋದರೆ ಮತ್ತೆ ಹುಟ್ಟಿ ಬರಲೇಬೇಕಾಗುತ್ತದೆ. ಧ್ರುವಂ ಜನ್ಮ ಮೃತಸ್ಯ ಚ' ಮನುಷ್ಯ ಜನ್ಮ ಕೇವಲ ಸಾಯುವುದಕ್ಕೋಸ್ಕರವೇ ಬಂದದ್ದಲ್ಲ. ಈ ಶ್ಲೋಕದಲ್ಲಿಮರಣಾಂತಂ ಚ ಜೀವಿತಂ’ (ಮರಣದ ಪರ್ಯಂತ ಜೀವಿತಾವಧಿ)ಎಂದಿದೆಯೇ ವಿನಹ ಮರಣವು ಪುನಃ ಹುಟ್ಟುವವರೆಗೆ ಎಂದು ಹೇಳಿಲ್ಲ.
ಅಂದರೆ ಧರ್ಮ-ಜ್ಞಾನಗಳ ಸಾಧನೆಗಳ ಮೂಲಕ ಸರಿಯಾಗಿ ಮರಣ ಹೊಂದಿದರೆ ಪುನಃ ಹುಟ್ಟಿ ಬರದಂತೆ ಮಾಡಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಜೀವನ ಪರ್ಯಂತ ಧರ್ಮ ಸಾಧನೆಯಲ್ಲಿ ಕರ್ತವ್ಯ ಕರ್ಮಯೋಗದಲ್ಲಿ ತೊಡಗಬೇಕು.

Exit mobile version