- ದಾವಣಗೆರೆ: ಬಡವರ ಮೀಸಲು, ರಾಜಕೀಯ ಶಕ್ತಿ ಕಿತ್ತುಕೊಳ್ಳುವ ಉದ್ದೇಶದಿಂದಲೇ ಜಾತಿ ಗಣತಿ ವರದಿ ಅನುಷ್ಠಾನಗೊಳಿಸಲು ಬಿಡುತ್ತಿಲ್ಲ ಎಂದು ಅಹಿಂದ ಚೇತನ ಸಂಚಾಲಕ ರಾಜು ಪಾಟೀಲ್ ‘ಜಾತಿ ಗಣತಿ ವರದಿ’ ವಿರೋಧಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಾಲಭವನದಲ್ಲಿ ಭಾನುವಾರ ಅಹಿಂದ ಚೇತನ ವತಿಯಿಂದ ಅಹಿಂದ ಸಮುದಾಯ ಬಂಧುಗಳ ಸಹಯೋಗದಲ್ಲಿ ‘ಜಾತಿ ಗಣತಿ-ಅಹಿಂದ ಶಕ್ತಿ’ ವಿರೋಧಿಸುವವರ ವಿರುದ್ಧ ಖಂಡನಾ ನಿರ್ಣಯ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಅನುಷ್ಠಾನಗೊಳಿಸಿದರೆ ನಮಗೆ ಉಳಿಗಾಲವಿಲ್ಲ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಒಂದೇ ಉದ್ದೇಶದಿಂದ ವರದಿ ಜಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಬುದ್ಧಿ ಕಲಿಸಬೇಕಾದರೆ ಅಹಿಂದ ಸಮುದಾಯಗಳು ಒಗ್ಗೂಡಿಸುವ ಮೂಲಕ ರಕ್ತಕ್ರಾಂತಿ ಹರಿಸಿದರೆ ಮಾತ್ರ ಸಾಧ್ಯವಿದೆ ಎಂದರು.
ಕಾಂತರಾಜ ಆಯೋಗದ ವರದಿ ಅವೈಜ್ಞಾನಿಕ, ವರದಿಯಲ್ಲಿ ಸತ್ಯಾಂಶವಿಲ್ಲ, ಸುಳ್ಳಿನಿಂದ ಕೂಡಿದೆ, ಈ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾವು ಅವರು ಹೇಳುವುದನ್ನು ಕೇಳಿಕೊಳ್ಳುತ್ತಾ ಸುಮ್ಮನೆ ಇದ್ದರೆ ವರದಿ ಜಾರಿಗೊಳಿಸಲು ಬಿಡುವುದಿಲ್ಲ. ಶೇ.86ರಷ್ಟು ಜನಸಂಖ್ಯೆ ಹೊಂದಿರುವ ಅಹಿಂದ ಸಮುದಾಯಗಳು ಯಾರಿಗೂ ಹೆದರಬೇಕಿಲ್ಲ. ನಮ್ಮ ಮಾತುಗಳು, ನಮ್ಮ ಆಕ್ರೋಶದ ಮಾತುಗಳು ಜಾತಿ ಗಣತಿ ವರದಿ ವಿರೋಧಿಸುವವರಿಗೆ ಕೇಳಿಸಬೇಕು. ಒಂದು ರೀತಿ ರಾಜ್ಯದಲ್ಲಿ ಸಂಚಲನ ಮೂಡಿಸುವ ಆಕ್ರೋಶದ ಮಾತುಗಳು ಅವರಿಗೆ ಕೇಳಬೇಕು. ಆಗ ನಮ್ಮ ಹಕ್ಕುಳಗಳನ್ನು ಪಡೆಯಲು ಸಾಧ್ಯ ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏನಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕೆಂಬುದೇ ಅವರಿಗೆ ಪ್ರಮುಖ ಅಜೆಂಡಾ. ಅಧಿಕಾರ ಹೋದರೂ ಚಿಂತೆ ಇಲ್ಲ, ನೀವು ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸಿ ನಿಮಗೆ ರಾಜಕೀಯ ಶಕ್ತಿ ನಾವು ಕೊಡುತ್ತೇವೆ. ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ ಎಂದು ಮುಖ್ಯಮಂತ್ರಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಯುವ ನಾಯಕ ವಿನಯ್ ಕುಮಾರ್, ಬಿ.ವೀರಣ್ಣ ಸೇರಿದಂತೆ ಅಹಿಂದ ಸಮುದಾಯಗಳ ಮುಂಚೂಣಿ ನಾಯಕರು ಈ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬಂದಿಲ್ಲ. ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಶಕ್ತಿ ಎಂತಹದ್ದು ಎಂದು ತೋರಿಸಬೇಕು. ಈ ನಿಟ್ಟಿನಲ್ಲಿ ಅಹಿಂದ ಸಮುದಾಯಗಳು ಒಗ್ಗೂಡಿ ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಹೋರಾಟದ ಮೂಲಕ ನಮ್ಮ ಶಕ್ತಿ ಪ್ರದರ್ಶಿಸೋಣ ಎಂದು ಕರೆ ನೀಡಿದರು.
ಡಿಎಸ್ ಎಸ್ ಮುಖಂಡ ಮಹೇಶ್ ಮಾತನಾಡಿ, ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ಒಡೆಯರ್, ಕೆ.ಮಲ್ಲಪ್ಪ, ಕೆ.ಜಿ.ಮಹೇಶ್ವರಪ್ಪ ಅವರ ಹಿಂದಿದ್ದ ರಾಜಕಾರಣ ಇಂದು ಇಲ್ಲ. ಇಂದಿನ ರಾಜಕಾರಣ ನೋಡಿದರೆ ಬಿರಿಯಾನಿ ಕೊಟ್ಟರೆ ಸಾಕು ರಾಜಕಾರಣಿಗಳ ಮನೆ ಬಾಗಿಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯುವ ನಾಯಕ ವಿನಯ್ ಕುಮಾರ್ ಅವರು ಸ್ಫರ್ಧಿಸಿದ್ದ ವೇಳೆ ಅವರ ಹಿಂದೆ-ಮುಂದೆ ಓಡಾಡಿ ನೀವೇ ಗೆಲ್ಲುತ್ತಿರಾ ಎಂದು ಆಸೆ ತೋರಿಸಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಅವರು ಸಂಸತ್ ಪ್ರವೇಶಿಸಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಮುಂದಾದರೂ ದಾವಣಗೆರೆ ಉತ್ತರ ಅಥವಾ ದಕ್ಷಿಣದಲ್ಲಿ ಅವರನ್ನು ನಿಲ್ಲಿಸಿ ಗೆಲ್ಲಿಸುವ ಕೆಲಸ ಮಾಡೋಣ ಎಂದರು.
ರಾಜು ಮೌರ್ಯ, ಪ್ರೊ.ದಾದಾಪೀರ್ ನವಿಲೇಹಾಳ್, ಪ್ರೊ.ಯಲ್ಲಪ್ಪ ಮಾತನಾಡಿದರು. ಆರ್.ಬಿ.ಪರಮೇಶ್, ಸಿದ್ದಲಿಂಗಪ್ಪ, ಚಂದ್ರು, ಅನಿಲ್, ದ್ಯಾಮಣ್ಣ ಸೇರಿದಂತೆ ಅಹಿಂದ ಸಮುದಾಯಗಳ ಬಂಧುಗಳು ಉಪಸ್ಥಿತರಿದ್ದರು.