ಬಾಗಲಕೋಟೆ: ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಅನಕ್ಷರಸ್ಥ ವ್ಯಕ್ತಿಯಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದ್ದ ವ್ಯಕ್ತಿಯಿಂದ ಹಣ ಮರಳಿ ಪಡೆಯುವಲ್ಲಿ ಯಶಸ್ವಿಯಾದ ಘಟನೆ ಬನಹಟ್ಟಿಯಲ್ಲಿ ನಡೆದಿದೆ.
ಇಲ್ಲಿನ ಕರ್ನಾಟಕ ಬ್ಯಾಂಕ್‌ನಲ್ಲಿ ಗುತ್ತಿಗೆ ನೌಕರನಾಗಿ ಕ್ರೆಡಿಟ್ ಕಾರ್ಡ್ ಸೇವೆಯಲ್ಲಿದ್ದ ವ್ಯಕ್ತಿ ದೇವೇಂದ್ರ ಮೈತ್ರಿ ಎಂಬಾತ ಬಾಜಿರಾವ್ ಮಗದುಮ್ ಎನ್ನುವವರಿಗೆ ಒಂದುವರೆ ವರ್ಷದಿಂದ ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಅವಧಿ ಮುಗಿಯುತ್ತಿದೆ ಅದನ್ನು ನವೀಕರಣ ಮಾಡಬೇಕು ಇಲ್ಲದಿದ್ದರೆ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದಿದ್ದಾರೆ. ಇದನ್ನು ನಂಬಿದ್ದ ದೂರುದಾರ ಕಾರ್ಡ್ ಮಾಹಿತಿ ಹಾಗೂ ಒಟಿಪಿ(ಒನ್ ಟೈಂ ಪಾಸ್‌ವರ್ಡ್) ನೀಡಿ ಹೀಗೆ 3 ಬಾರಿ 50 ಸಾವಿರ ರೂ.ಗಳಂತೆ ಹಣ ಒಟ್ಟು 1.47.200/-ಗಳನ್ನು ಎಗರಿಸಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದೇ ವಿಶೇಷ
ಒಂದುವರೆ ವರ್ಷದಿಂದ ಅನಕ್ಷರಸ್ಥ ಬಾಬುರಾವ್ ಮಗದುಂ ಮೊಬೈಲ್‌ಗಳಲ್ಲಿ ಯಾವುದೇ ಮೆಸೇಜ್ ಗೊತ್ತುಪಡಿಸಿಕೊಂಡಿದಲ್ಲ. ಈಚೆಗೆ ಮಾರ್ಚ್ 4ರಂದು ಬ್ಯಾಂಕ್‌ನಿಂದ ನೋಟಿಸ್ ಜಾರಿಗೊಳಿಸಿ ತಕ್ಷಣವೇ ಹಣ ತುಂಬಬೇಕೆಂದು ಆದೇಶಿಸಿದಾಗ, ವಿಚಲಿತನಾದ ಮಗದುಂ ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಾನೆ.
ಜಾಣ್ಮೆ ಪ್ರದರ್ಶನ
ಇದನ್ನರಿತ ಶಾಖಾ ವ್ಯವಸ್ಥಾಪಕ ಪ್ರವೀಣ ಕಾಲತಿಪ್ಪಿ ತಕ್ಷಣ ಪ್ರಧಾನ ಕಚೇರಿಗೆ ವಂಚನೆಗೊಳಗಾದ ವ್ಯಕ್ತಿಯ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಂಡಿದ್ದಾರೆ. ನಂತರ ಪ್ರಕರಣದಲ್ಲಿ ಗುತ್ತಿಗೆ ಸಿಬ್ಬಂದಿ ದೇವೇಂದ್ರ ಮೈತ್ರಿ ಹಸ್ತಕ್ಷೇಪವಿರುವುದು ಬೆಳಕಿಗೆ ಬಂದ ನಂತರ ತಪ್ಪೊಪ್ಪಿಕೊಂಡ ಸಿಬ್ಬಂದಿ ವಾಪಸ್ ಪೂರ್ತಿ ಹಣ ವಂಚನೆಗೊಳಗಾದ ಮಗದುಮ್ ಖಾತೆಗೆ ಹಣ ಭರಣಾ ಮಾಡಿದ್ದಾನೆ.
ಇನ್ನಷ್ಟು ಜನರಿಗೆ ಇಂಥಹದೇ ರೀತಿಯಲ್ಲಿ ವಂಚನೆ ಮಾಡಿರುವ ಶಂಕೆಯಿದ್ದು, ಇವೆಲ್ಲದರ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.