Home News ಕರಾವಳಿ ಪ್ರದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಜನರಿಗೆ ನೆನಪಿಸಲು ಹೊರಟಿದೆ

ಕರಾವಳಿ ಪ್ರದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಜನರಿಗೆ ನೆನಪಿಸಲು ಹೊರಟಿದೆ

ಕೊಪ್ಪಳ: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ, ಬಂಧಿಸಲಾಗುತ್ತಿದೆ. ಇದರಿಂದ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ತುರ್ತುಪರಿಸ್ಥಿತಿ ಕುಖ್ಯಾತಿಯ ಕಾಂಗ್ರೆಸ್ ಕರಾವಳಿ ಪ್ರದೇಶದಲ್ಲಿ ಮತ್ತೆ ಅದನ್ನು ಜನರಿಗೆ ನೆನಪಿಸಲು ಹೊರಟು ಹಿಂದೂ ಪ್ರಮುಖರು ಹಾಗೂ ಬಿಜೆಪಿ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಹೊರಟಿದೆ.
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಮತ ಬ್ಯಾಂಕ್ ಭದ್ರ ಪಡಿಸಿಕೊಳ್ಳಲು ಮುಸ್ಲಿಂ ಸಮುದಾಯವನ್ನು ಓಲೈಸುವ ಭರದಲ್ಲಿ ವಿದ್ವಂಸಕ ಕೃತ್ಯ ನಡೆಸುತ್ತಿರುವವರ ರಕ್ಷಣೆಗೆ ನಿಲ್ಲುತ್ತಲೇ ಬಂದಿದೆ.

ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಸಮಾಜಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಂಡಿದೆ, ಮೊನ್ನೆಯಷ್ಟೇ ಈ ಸಂಬಂಧ ಘನ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ.

ಕರಾವಳಿ ಪ್ರದೇಶದಲ್ಲಿ ಮತಾಂಧ ದುಷ್ಟಶಕ್ತಿಗಳ ನಿರಂತರ ಅಟ್ಟಹಾಸ ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆ ಪ್ರಕರಣಗಳು ಸರಣಿ ರೂಪದಲ್ಲಿ ಘಟಿಸುತ್ತಲೇ ಇವೆ, ಈ ಸಂಬಂಧ ಹಿಂದೂ ಸಮಾಜಕ್ಕೆ ರಕ್ಷಣೆ ನೀಡಬೇಕಿದ್ದ ಪೊಲೀಸ್ ವ್ಯವಸ್ಥೆ ವಿಪರ್ಯಾಸ ಎನ್ನುವಂತೆ ಹಿಂದೂ ಸಂಘಟಕರಿಗೆ ನಿರಂತರ ಕಿರುಕುಳ ನೀಡುತ್ತಾ, ಸುಳ್ಳು ಕೇಸುಗಳನ್ನು ದಾಖಲಿಸುತ್ತಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಟ್ರಕ್ ಚಾಲಕನೊಬ್ಬನ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಘಟಿತವಾಗಿ ಸರ್ಕಾರಕ್ಕೆ ಬೆದರಿಕೆ ಒಡ್ಡಿದ ಮುಸ್ಲಿಂ ಸಮುದಾಯದ ಒತ್ತಾಯಕ್ಕೆ ಬೆದರಿ ದಿಢೀರನೇ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಯನ್ನು 24 ಗಂಟೆಯೊಳಗೆ ವರ್ಗಾವಣೆ ಮಾಡಿತ್ತು, ಇದರ ಬೆನ್ನಲ್ಲೇ ಹಿಂದೂ ಸಮಾಜದ ಮುಖ್ಯಸ್ಥರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ದೂಡುವ ಪಿತೂರಿ ನಡೆಯುತ್ತಿದೆ.

ಇಂದು ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ್ದು, ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮನೆ, ಮನೆಗಳನ್ನು ಶೋಧಿಸಿ ಆತಂಕದ ವಾತಾವರಣ ಸೃಷ್ಟಿಸುತ್ತಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ.

ಅದೇ ರೀತಿ ನಮ್ಮ ಪಕ್ಷದ ಮುಖಂಡರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಗಡಿಪಾರು ಮಾಡುತ್ತಿರುವ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಾಚಿಕೆಗೇಡಿನ ಕ್ರಮವಾಗಿದೆ. ಒಂದು ಸಮುದಾಯದ ಪರವಾಗಿ ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರ ನಿಲ್ಲುವ ಮೂಲಕ ಕರಾವಳಿ ಪ್ರದೇಶದ ಸಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಭಯ ಪೀಡಿತ ಜಿಲ್ಲೆಗಳನ್ನಾಗಿಸಲು ರಾಜ್ಯ ಸರ್ಕಾರ ಹೊರಟಂತಿದೆ.

ಕಾಂಗ್ರೆಸ್ ಸರ್ಕಾರದ ನಡೆ, ಪೊಲೀಸರ ವರ್ತನೆ ಏಕಪಕ್ಷೀಯವಾಗಿ ಇದೇ ರೀತಿ ಮುಂದುವರೆದರೆ ಕರ್ನಾಟಕ ಬಿಜೆಪಿ ಸುಮ್ಮನೆ ಕೂರದು ಎಂದು ಎಚ್ಚರಿಸ ಬಯಸುತ್ತೇನೆ. ಈ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಿ ಗಡಿಪಾರು ಆದೇಶ ಹಿಂಪಡೆಯಲಿ, ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾದೀತು ಎಂದಿದ್ದಾರೆ.

Exit mobile version