Home News `ಉತ್ತರದ ಸಾಲು ದೀಪಗಳು’ ಕೃತಿ ಲೋಕಾರ್ಪಣೆ

`ಉತ್ತರದ ಸಾಲು ದೀಪಗಳು’ ಕೃತಿ ಲೋಕಾರ್ಪಣೆ

ಹುಬ್ಬಳ್ಳಿ : ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಿ ಹುಬ್ಬಳ್ಳಿ ಕೇಂದ್ರ ಸ್ಥಾನ ಪತ್ರಕರ್ತರ ಬಳಗ ಹಾಗೂ ಈ ಭಾಗದ ಜಿಲ್ಲೆಗಳ ಹಲವು ದಶಕಗಳ ಹಿಂದಿನ ಹಿರಿಯ ಪತ್ರಕರ್ತರು ತೋರಿದ ಕಾಳಜಿ, ಮೊಳಗಿಸಿದ ಧ್ವನಿ ಅನನ್ಯ. ಆ ಪರಂಪರೆ ಮುಂದುವರಿಯಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಸಂಪಾದಿತ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಕಟಿಸಿದ `ಉತ್ತರದ ಸಾಲು ದೀಪಗಳು’ ಕೃತಿಯನ್ನು ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪಾವಿತ್ರ್ಯ ಕಾಯ್ದುಕೊಳ್ಳಬೇಕು….
ಆಗಿನ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕರಾಗಿದ್ದ ಎನ್.ವಿ ಜೋಶಿ, ಹುಬ್ಬಳ್ಳಿಯ ಹಿಂದು ಪತ್ರಿಕೆಯ ಹಿರಿಯ ವರದಿಗಾರರಾಗಿದ್ದ ಮತ್ತಿಹಳ್ಳಿ ಮದನಮೋಹನ್ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ನಮಗೆ ಮಾರ್ಗದರ್ಶನ ಮಾಡಿದ ಮಹನೀಯರು. ಬರಗಾಲ, ನನೆಗುದಿಗೆ ಬಿದ್ದ ನೀರಾವರಿ ಯೋಜನೆಗಳು, ಮೂಲಭೂತ ಸೌಕರ್ಯ ಕೊರತೆ ಸೇರಿದಂತೆ ದೂರದೃಷ್ಟಿ ಯೋಜನೆಗಳ ಸಾಕಾರಕ್ಕೆ ಸದಾಕಾಲ ಎಚ್ಚರಿಕೆಯ ಗಂಟೆಯಾಗಿ ವರದಿಗಳ ಮೂಲಕ ಗಮನ ಸೆಳೆಯುತ್ತಿದ್ದರು. ಅಂದು ಮಾಧ್ಯಮಗೋಷ್ಠಿ ಎದುರಿಸುವ ಬಗೆ ಹಾಗೂ ರಾಜಕಾರಣಿಗಳ ಸಾಕ್ಷಿಪ್ರಜ್ಞೆಯನ್ನು ಜಾಗೃತರಾಗಿ ಇಡುತ್ತಿದ್ದರು. ಇದು ಅವರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಅಂತಹ ಪರಂಪರೆ ಮುಂದುವರಿಯಬೇಕು. ಪತ್ರಿಕೋದ್ಯಮದಲ್ಲಿ ಎಷ್ಟೇ ಬದಲಾವಣೆಗಳಾದರೂ ಸಂಪಾದಕೀಯ ವಿಭಾಗಕ್ಕೆ ವಾಣಿಜ್ಯ ಸ್ಪರ್ಶವಾಗದ ರೀತಿ ಪಾವಿತ್ರö್ಯ ಕಾಯ್ದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಹಕಾರದ ಭರವಸೆ…
ಪತ್ರಕರ್ತ ಜೀವನ್ ಅವರು ಬರೆಯದ ಸಾಹಿತ್ಯವೇ ಇಲ್ಲ. ಎಲ್ಲ ವಿಷಯಗಳ ಬಗ್ಗೆಯೂ ಬರೆದ ಅಪರೂಪದ ಪತ್ರಕರ್ತ. ಅವರ ಬರಹಗಳ ಸಮಗ್ರ ಕೃತಿ ಪ್ರಕಟಣೆಗೆ ಮುಂದಾದರೆ ಅದಕ್ಕೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮೂಲಕವಾಗಲಿ ಸಹಕಾರ ನೀಡುವುದಾಗಿ ಸಚಿವ ಎಚ್.ಕೆ ಪಾಟೀಲ ಭರವಸೆ ನೀಡಿದರು.
ಕೃತಿಯಲ್ಲಿ ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಯ ಅನೇಕ ಹಿರಿಯ ಪತ್ರಕರ್ತರ ಕುರಿತು ಉಲ್ಲೇಖವಿಲ್ಲ. ಹೀಗಾಗಿ, ಉತ್ತರದ ಸಾಲುದೀಪ ಕೃತಿ ಭಾಗ -೨ ಪ್ರಕಟಿಸಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ದಿನೇಶ ಅಮಿನಮಟ್ಟು ಮಾತನಾಡಿ, ಹಿಂದೆ ಮಾಧ್ಯಮಗಳಿಗೆ ಇದ್ದ ಗೌರವ ಈಗ ಇಲ್ಲ. ಬದಲಾಗಿ ಈಗ ಮಾಧ್ಯಮ ಎಂದರೆ ಭಯ ಇದೆ. ಹೊಸ ಆರ್ಥಿಕ ನೀತಿ ಪರಿಣಾಮ ಕಾರ್ಪೊರೇಟ್ ವ್ಯವಸ್ಥೆ ಪತ್ರಿಕೋದ್ಯಮದ ಸ್ವರೂಪ ಹೊಸಕಿ ಹಾಕಿದೆ. ಇದು ಅಪಾಯಕಾರಿ ಸಂಗತಿಯಾಗಿದೆ. ಜಾಗೃತ ಸಮಾಜದಿಂದ ಜಾಗೃತ ಮಾಧ್ಯಮ ಕ್ಷೇತ್ರ ಹಾಗೂ ಜಾಗೃತ ಮಾಧ್ಯಮ ಕ್ಷೇತ್ರದಿಂದ ಜಾಗೃತ ಸಮಾಜ ನಿರ್ಮಾಣಗಬೇಕು. ಮಾಧ್ಯಮ ಕ್ಷೇತ್ರಕ್ಕೆ ಉದ್ಯಮಿಗಳ ಪ್ರವೇಶಕ್ಕಿಂತ ರಾಜಕಾರಣಿಗಳ ಪ್ರವೇಶ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಅಮೂಲ್ಯ ಕೊಡುಗೆ….
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರದ ಸಾಲು ದೀಪಗಳು ಕೃತಿಯು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಉತ್ತರ ಕರ್ನಾಟಕ ಭಾಗದ ಪತ್ರಕರ್ತರಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ಕೃತಿಯನ್ನು ಬಹಳ ನಿಷ್ಠೆ, ಪರಿಶ್ರಮಗಳಿಂದ ಸಿದ್ಧಪಡಿಸಿದ ಎಲ್ಲ ಪತ್ರಕರ್ತರಿಗೂ ಹಾಗೂ ಸಂಪಾದಕರಿಗೂ ಅಭಿನಂದನೆ ಎಂದು ಹೇಳಿದರು.
ಸಂಯುಕ್ತ ಕರ್ನಾಟಕ ಪತ್ರಿಕಾ ಕ್ಷೇತ್ರದ ಹಿರಿಯಣ್ಣನ ಸ್ಥಾನದ ಪತ್ರಿಕೆ. ೧೯೭೦-೮೦ ರ ದಶಕದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ನಮ್ಮ ಹೋರಾಟದ ಸುದ್ದಿಗಳು ಪ್ರಕಟವಾದರೆ ಎಲ್ಲಿಲ್ಲದ ಸಂತೋಷ. ಹಾಗೆಯೇ ಐದು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಶಿಕ್ಷಕರ ಪರ ಹೋರಾಟಗಳನ್ನು ಹಾಗೂ ಅನ್ಯಾಯದ ವಿರುದ್ಧ ನನ್ನ ಎಲ್ಲ ಪ್ರತಿಭಟನೆಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ವರದಿ ಮಾಡಿ ಶಕ್ತಿ ತುಂಬಿದ ಅನೇಕ ಮಹನೀಯರಿದ್ದಾರೆ. ಅವರೆಲ್ಲರಿಗೂ ಗೌರವಿಸುತ್ತೇನೆ ಎಂದು ನುಡಿದರು.
ವಿಶ್ರಾಂತ ವಾರ್ತಾಧಿಕಾರಿ ಪಿ.ಎಸ್. ಪರ್ವತಿ ಪುಸ್ತಕ ವಿಮರ್ಶೆ ಮಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ವೇದಿಕೆಯಲ್ಲಿದ್ದರು.

ಸಂ.ಕ. ಮುಗಿಯದ ಕಡಲು….
ಉತ್ತರ ಕರ್ನಾಟಕ ಭಾಗದ ನೆಲದಲ್ಲಿ ಪತ್ರಿಕೋದ್ಯಮ ಹೇಗೆ ಹುಲುಸಾಗಿ ಬೆಳೆದಿದೆ ಎಂಬುದನ್ನು ವಿವಿಧ ಮಜಲುಗಳ ಮೂಲಕ ಈ ಕೃತಿಯಲ್ಲಿ ತಿಳಿಸಿದ್ದೇನೆ. ಈ ಕೃತಿ ಬರೆಯಲು ಸಂಯುಕ್ತ ಕರ್ನಾಟ' ಕಾರಣ. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಲ್ಲಿ ಸಿಕ್ಕ ಮಾಹಿತಿ, ಸಂಪನ್ಮೂಲ ವ್ಯಕ್ತಿಗಳು ಕೃತಿ ಸಂಪಾದಿಸಲು ಸಹಾಯಕವಾಯಿತು.ಸಂಯುಕ್ತ ಕರ್ನಾಟಕ’ ಮುಗಿಯದ ಕಡಲು ಎಂದು ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.
ಸ್ವಾತಂತ್ರö್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಗೋವಾ ವಿಮೋಚನಾ ಚಳವಳಿ ಸೇರಿದಂತೆ ಹಲವು ಹೋರಾಟಗಳಿಗೆ ಸಾಕ್ಷಿ `ಸಂಯುಕ್ತ ಕರ್ನಾಟಕ’. ಆ ಪತ್ರಿಕಾಲಯ ಆವರಣದಲ್ಲಿನ ನಿರ್ಜಿವ ವಸ್ತುಗಳು ಒಂದೊಂದು ಕತೆ ಹೇಳಿದರೆ, ಸುದ್ದಿ ಕೊಡಲು ಬಂದಂತಹ ವ್ಯಕ್ತಿಗಳು ಒಂದೊಂದು ಕತೆಯನ್ನು ಸಂ.ಕ. ಬಗ್ಗೆ ಹೇಳಿ ಹೋಗುತ್ತಾರೆ. ನಾನು ಸಂಪಾದಿಸಿದ ಈ ಕೃತಿ ೨೦೨೨ ಮೇ ೬ ರಂದು ಮುದ್ರಣಗೊಂಡಿದೆ ಎಂದರು.

Exit mobile version