Home ನಮ್ಮ ಜಿಲ್ಲೆ ಕಲಬುರಗಿ ಆಂತರಿಕ ಕಚ್ಚಾಟದಿಂದ ಸರ್ಕಾರ ಶೀಘ್ರ ಪತನ

ಆಂತರಿಕ ಕಚ್ಚಾಟದಿಂದ ಸರ್ಕಾರ ಶೀಘ್ರ ಪತನ

0

ಕಲಬುರಗಿ: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು, ಒಂದು ವರ್ಷದ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.
ವಿಧಾನ ಪರಿಷತ್ ಚುನಾವಣಾ ಪ್ರಚಾರದಂಗವಾಗಿ ಕಲಬುರಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ಒಂದೇ ಒಂದು ಹೊಸ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ‌. ಶಾಸಕರಿಗೆ ಅನುದಾನ ಮರೀಚಿಕೆಯಾಗಿರುವುದು, ರಾಜ್ಯದಿಂದ ಮೊದಲು ಬರ ಪರಿಹಾರ ನೀಡದೇ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿರುವುದು, ರಾಜ್ಯದಲ್ಲಿ ಹೆಚ್ಚಿದ ಕೊಲೆಗಳು, ಎಲ್ಲೇ ಮೀರಿದ ಡ್ರಗ್ಸ್ ಮಾಫಿಯಾ, ಬಾಲ ಬಿಚ್ಚಿದ ರೌಡಿಗಳು, ಇದಕ್ಕೆ ರಾಜಕೀಯ ಕುಮ್ಮಕ್ಕು, ರೇವ್ ಪಾರ್ಟಿ ಮೇಲೆ ದಾಳಿ, ಕುಸಿದ ಶೈಕ್ಷಣಿಕ ರಂಗ, ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟ ಸರ್ಕಾರ ವಿಫಲತೆಗೆ ಸಾಕ್ಷಿಗಳಾಗಿವೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಆರ್ಥಿಕ ಸ್ಥಿತಿಯಂತು ಹೇಳದಂತಿದೆ. ಬಜೆಟ್ ಘೋಷಣೆ ಕಾಮಗಾರಿಗಳ ಪರಿಶೀಲನೆ ಸಹ ಮಾಡಲಿಕ್ಕಾಗಿಲ್ಲ.‌ ಒಟ್ಟಾರೆ ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ತಮ್ಮ ಅವಧಿಯಲ್ಲಿ ಪ್ರಾರಂಭಿಸಿದ ವಿವೇಕ ಕಾರ್ಯಕ್ರಮದಡಿಯ 9,000 ಶಾಲಾ ಕೊಠಡಿಗಳ ನಿರ್ಮಾಣ ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿವೆ ಎಂದು ಬೊಮ್ಮಾಯಿ ಟೀಕಿಸಿದರು.
ಶೀಘ್ರ ಸರ್ಕಾರ ಪತನ:
ಮುಖ್ಯಮಂತ್ರಿಗಳೇ ರಾಜ್ಯದಿಂದ ಪಿಎಂ ಅಭ್ಯರ್ಥಿ ಯಾರೂ ಇಲ್ಲ‌ ಎಂದಿರುವುದಕ್ಕೆ ನಾಯಕತ್ವದ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಶೀಘ್ರದಲ್ಲೇ ತನ್ನ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು. ‌
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 25 ಸೀಟು ಗೆಲ್ಲುತ್ತದೆ. ಕಾಂಗ್ರೆಸ್ ಇನ್ನೇರಡು ಸೀಟುಗಳ ಹೆಚ್ಚಳಕ್ಕೆ ತೃಪ್ತಿ ಪಡಬೇಕಾಗುತ್ತದೆ. ಜನರು ಮೋದಿ ಅವರ ಕೈ ಬಲಪಡಿಸುವುನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

Exit mobile version