ಕೊಪ್ಪಳ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಶರಣಬಸವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಹೇಳಿದರು.
ನಗರದ ಎಸ್ಪಿ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾರ್ಚ್ ೮ರಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ನಾಪತ್ತೆಯಾಗಿದ್ದ ಇನ್ನೋರ್ವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಮಾರ್ಚ್ ೯ರಂದು ತಮಿಳುನಾಡಿನ ಚೆನೈನಲ್ಲಿ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮೂರು ಆರೋಪಿಗಳು ಗಂಗಾವತಿಯ ಒಂದೇ ಏರಿಯಾದವರಾಗಿದ್ದು, ಆರೋಪಿಗಳಿಂದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆಸಿದ್ದೇವೆ ಎಂದರು.
ಸಾಣಾಪುರ ಭಾಗದ ಎಲ್ಲ ರೆಸಾರ್ಟ್ ಮತ್ತು ಹೋಮ್ ಸ್ಟೇಗಳ ಮಾಲೀಕರ ಜತೆ ಸಭೆ ನಡೆಸಲಾಗಿದ್ದು, ಸಿ.ಸಿ.ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಪ್ರವಾಸಿಗರ ನೋಂದಣಿ ಮತ್ತು ದಾಖಲೆ ಕಡ್ಡಾಯವಾಗಿ ಪಡೆಯಬೇಕು. ಪ್ರವಾಸೋದ್ಯಮ ಇಲಾಖೆಯವರೊಂದಿಗೆ ಚರ್ಚೆ ಮಾಡಿದ್ದು, ಕಾನೂನು ಬಾಹಿರವಾಗಿ ಚಟುವಟಿಕೆ ಮಾಡುವ ರೆಸಾರ್ಟ್ ಮತ್ತು ಹೋಮ್ ಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ ಇದ್ದರು.