Home ನಮ್ಮ ಜಿಲ್ಲೆ ಕೊಪ್ಪಳ ಅಂಜನಾದ್ರಿ ಬೆಟ್ಟಗಳಲ್ಲಿ ಮಾರ್ಧನಿಸಿದ ಜೈ ಶ್ರೀರಾಮ್…

ಅಂಜನಾದ್ರಿ ಬೆಟ್ಟಗಳಲ್ಲಿ ಮಾರ್ಧನಿಸಿದ ಜೈ ಶ್ರೀರಾಮ್…

0

ಗಂಗಾವತಿ(ಕೊಪ್ಪಳ): ಹನುಮಮಾಲೆ ಹಾಕಿ, ಕೇಸರಿ ಉಡುಪು ಧರಿಸಿದ ಮಾಲಾಧಾರಿಗಳು ಮಾಲೆ ವಿಸರ್ಜನೆಗೆ ಅಂಜನಾದ್ರಿ ಮೆಟ್ಟಿಲು ಏರುತ್ತಿದ್ದಾಗ ಬೆಟ್ಟಗಳಲ್ಲಿ ‘ಶ್ರೀರಾಮ್, ಜೈರಾಮ್, ಜೈ ಜೈ ರಾಮ್….’, ‘ರಾಮ, ಲಕ್ಷ್ಮಣ, ಜಾನಕಿ….ಜೈ ಬೋಲೋ ಹನುಮಾನ್ ಕೀ….’ ಎನ್ನುವ ಘೋಷಣೆಗಳು ಮಾರ್ಧನಿಸಿದವು.

ಶುಕ್ರವಾರ ಬೆಳ್ಳಂ ಬೆಳಿಗ್ಗೆಯಿಂದಲೇ ಚಂಡಿಕಾ ಹೋಮ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹನುಮಮಾಲಾಧಾರಿಗಳು
ಬೆಟ್ಟವೇರಿ, ಮಾಲೆ ವಿಸರ್ಜನೆಗೆ ಮುಂದಾದರು. ‘ಮಾತನಾಡು ಶ್ರೀರಾಮ ಮಾತನಾಡು’, ‘ರಾಮ ರಾಮ ರಾಮ್ ರಾಮ್ ರಾಮ್….’ ಎನ್ನುವ ಗೀತೆ‌ಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಮೆಟ್ಟಿಲು ಏರಿದರು. ೨೧ ದಿನ, ೧೧ ದಿನ, ೫ ದಿನ, ೩ ದಿನ ಮತ್ತು ೧ ದಿನಗಳ ಹನುಮ ಮಾಲೆ ಧಾರಣೆ ಮಾಡಿದ ಲಕ್ಷಾಂತರ ಭಕ್ತರು, ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಆಂಜನೇಯನ ದೇವಸ್ಥಾನದಲ್ಲಿ ಶುಕ್ರವಾರ ಹನುಮ ಮಾಲೆ ವಿಸರ್ಜನೆ ಮಾಡಿದರು.

ರಾಜ್ಯದ ಕೊಪ್ಪಳ, ಧಾರವಾಡ, ಬೆಳಗಾವಿ, ಗದಗ, ಬಳ್ಳಾರಿ, ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳಿಂದ ಬಸ್, ಕ್ರೂಸರ್, ಟಿಟಿ ಇನ್ನಿತರ ವಾಹನಗಳಲ್ಲಿ ಆಗಮಿಸಿದ್ದರು. ಇನ್ನೂ ಕೆಲವರು ಪಾದಯಾತ್ರೆಯ ಮೂಲಕ ತಂಡೋಪ ತಂಡವಾಗಿ ಆಗಮಿಸಿ, ವೃತಾಚರಣೆ ಪೂರ್ಣಗೊಳಿಸಿದರು. ಹನುಮಮಾಲೆ ಧರಿಸಿದ ಚಿಕ್ಕಮಕ್ಕಳನ್ನು ಹೆಗಲ ಮೇಲೆ ಹೊತ್ತು ಯುವಕರು ಆಂಜನೇಯನ ದರ್ಶನ ಮಾಡಿಸಿದರು. ಹನುಮ ಮಾಲಾಧಾರಿಗಳಿಗೆ ವಾಹನ ಪಾರ್ಕಿಂಗ್ ಸ್ಥಳದಿಂದ ಜಿಲ್ಲಾಡಳಿತವು ಉಚಿತ ಬಸ್ ವ್ಯವಸ್ಥೆ ಮಾಡಿತ್ತು.

ಭಜರಂಗಿ ಮತ್ತು ಯಾದಗಿರಿ ಎಂದು ಬರೆಯಲಾದ ನಾಲ್ಕು ಬೃಹದಾಕಾರದ ಕೇಸರಿ ಧ್ವಜಗಳನ್ನು ಹಿಡಿದು, ಪ್ರದರ್ಶಿಸಿರುವುದು ಎಲ್ಲರ ಗಮನ ಸೆಳೆಯಿತು. ಆಂಜನೇಯ, ಭುವನೇಶ್ವರಿ, ನಟ ಪುನೀತ್ ರಾಜಕುಮಾರ, ನಟ ದರ್ಶನ ಸೇರಿ ವಿವಿಧ ಕ್ಷೇತ್ರಗಳ ತಮಗಿಷ್ಟದ ನಾಯಕರ ಭಾವಚಿತ್ರಗಳನ್ನು ಕೈಯಲ್ಲಿ ಹಿಡಿದು, ಅಂಜನಾದ್ರಿ ಬೆಟ್ಟ ಹತ್ತಿ, ಆಂಜನೇಯನ ದರ್ಶನ ಪಡೆದರು. ಅಲ್ಲದೇ ಕೆಲ ಮಾಲಾಧಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಪರ ಘೋಷಣೆಗಳನ್ನು ಕೂಗಿದರು.

Exit mobile version