ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ೫ ವರ್ಷದ ಹೆಣ್ಣು ಮಗು ಮೃತಪಟ್ಟ ಘಟನೆ ನಡೆದಿದೆ.
ಬಾಲಕಿ ಅಲಿಯಾ ಮಹಮ್ಮದ್ ರಿಯಾಜ್(೫) ಮೃತಳು. ಎಂದಿನಂತೆ ಬಾಲಕಿ ಅಂಗನವಾಡಿಯಲ್ಲಿ ಆಟವಾಡುತ್ತಿದ್ದಳು. ಏಕಾಏಕಿಯಾಗಿ ಮೂರ್ಛೆ ರೋಗ ಬರುವ ರೀತಿಯಲ್ಲಿ ಅಸ್ವಸ್ಥಗೊಂಡು ಕುಂತಲ್ಲೇ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ತಾಯಿ ಮತ್ತು ಆಶಾ ಕಾರ್ಯಕರ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಷ್ಟಗಿ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಮುಖ್ಯ ವೈದ್ಯಾಧಿಕಾರಿ ಕೆ.ಎಸ್. ರೆಡ್ಡಿ, ಹಾಗೂ ಚಿಕ್ಕ ಮಕ್ಕಳ ತಜ್ಞರಾದ ಮಾಂತೇಶ ಅವರು ಮಗುವನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿ ಎಕ್ಸ್ರೇ ಮಾಡಿ ನೋಡಿದಾಗ ಮಗು ಯಾವುದೇ ರೀತಿ ಏನೂ ನುಂಗಿರುವುದಿಲ್ಲ ಆದರೆ ಮಗು ಮೊದಲೇ ಮೃತಪಟ್ಟಿತ್ತು ಎಂದು ತಿಳಿಸಿದರು. ಮಗು ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ಮರಣೋತ್ತರ ಪರೀಕ್ಷೆ ಬಳಿಕ ನಿಖರ ಮಾಹಿತಿ ದೊರೆಯಲಿದೆ ಎಂದು ಡಾ. ಕೆ.ಎಸ್ ರೆಡ್ಡಿ ತಿಳಿಸಿದರು.